ದಾವಣಗೆರೆ, ಫೆ.14- ಜಿಲ್ಲೆಯು ರಾಜ್ಯದ ಮಧ್ಯ ಭಾಗದಲ್ಲಿದ್ದು, ರಾಜ್ಯದ ಕೇಂದ್ರ ಬಿಂದುವಾಗಿರುತ್ತದೆ. ಆದ ಪ್ರಯುಕ್ತ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ನಾಳೆ ಮಂಡಿಸಲಿರುವ ಬಜೆಟ್‌ನಲ್ಲಿ ಒತ್ತು ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘವು ಒತ್ತಾಯಿಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಜಿಲ್ಲೆಯಲ್ಲಿ 477 ಕೆರೆಗಳಿದ್ದು, ಇದರಲ್ಲಿ ಬೃಹತ್ ನೀರಾವರಿ, ಮಧ್ಯಮ ಹಾಗೂ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಕೆರೆಗಳಿದ್ದು, ಸುಮಾರು ವರ್ಷಗಳಿಂದ ಹೂಳು ತುಂಬಿದ್ದು, ಹಾಗಾಗಿ ಮಳೆಗಾಲದಲ್ಲಿ ನೀರು ವ್ಯರ್ಥವಾಗಿ ಹಳ್ಳ ಮತ್ತು ನದಿಗಳ ಮುಖಾಂತರ ಸಮುದ್ರ ಸೇರುತ್ತಿದೆ.
ಬೇಸಿಗೆಯಲ್ಲಿ ಸರ್ಕಾರದಿಂದ ಹೂಳು ತೆಗೆಸಿ, ಆ ಫಲವತ್ತಾದ ಮಣ್ಣನ್ನು ಅತಿ ಸಣ್ಣ ರೈತರಿಗೆ ಗೊಬ್ಬರಗಳಿಗೆ ಸಬ್ಸಿಡಿ ನೀಡುವ ಬದಲು ನೀಡುವಂತಾಗಬೇಕು.
ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಸಲುವಾಗಿ ಏಷ್ಯಾ ಖಂಡದಲ್ಲಿಯೇ 2ನೇ ದೊಡ್ಡ ಸೂಳೆಕೆರೆಯನ್ನು ಅಭಿವೃದ್ಧಿ ಪಡಿಸಿ, ಜಮ್ಮು-ಕಾಶ್ಮೀರದಲ್ಲಿರುವ ದಾಲ್ ಸರೋವರವನ್ನು ಅಭಿವೃದ್ಧಿ ಪಡಿಸಿದಂತೆ ಅಭಿವೃದ್ಧಿ ಪಡಿಸಿದರೆ, ಪ್ರವಾಸಿ ತಾಣ ಮತ್ತು ಉದ್ಯೋಗ ಸೃಷ್ಟಿಯಾಗುತ್ತದಲ್ಲದೆ, ಸರ್ಕಾರಕ್ಕೆ ರಾಜಧನ ಸಂಗ್ರಹಿಸಿದಂತಾಗುತ್ತದೆ.
ಆಯಾ ತಾಲ್ಲೂಕಿನ ಬೆಳೆಗಳಿಗನುಗುಣವಾಗಿ ಗ್ರಾಮ ಪಂಚಾಯ್ತಿ ಹೋಬಳಿ ಮತ್ತು ತಾಲ್ಲೂಕು ಮಟ್ಟದಲ್ಲಿ ಬೆಳೆಗಳಾದ ಅಡಿಕೆ, ತೆಂಗು, ಮೆಕ್ಕೆಜೋಳ, ತರಕಾರಿ ಬೆಳೆಗಳ ಸಂಸ್ಕರಣಾ ಘಟಕ ಹಾಗೂ ಇಂಡಸ್ಟ್ರಿಗಳನ್ನು ಸರ್ಕಾರ ಘೋಷಣೆ ಮಾಡಬೇಕು. ಕಳೆದ ವರ್ಷ ಅತೀ ಹೆಚ್ಚು ಮಳೆ ಸುರಿದ ಪ್ರಯುಕ್ತ ಗ್ರಾಮೀಣ ಪ್ರದೇಶದ ರಸ್ತೆಗಳು ತುಂಬಾ ಹದಗೆಟ್ಟಿದ್ದು, ಅವುಗಳನ್ನು ಸರಿಪಡಿಸಿದಲ್ಲಿ ಅಪಘಾತದ ಮರಣಗಳನ್ನು ತಡೆದಂತಾಗುತ್ತದೆ ಹಾಗೂ ಸುರಕ್ಷಿತವಾಗಿ ಪ್ರಯಾಣಿಸಬಹುದು.
ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಗಳ ಕಟ್ಟಡಗಳು ಬಹಳ ಶಿಥಿಲಗೊಂಡಿದ್ದು, ಆಟದ ಮೈದಾನಗಳ ಕೊರತೆಯೂ ಇದೆ. ಹಾಗಾಗಿ ದೈಹಿಕ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಜಿಲ್ಲಾ ಉಪಾಧ್ಯಕ್ಷ ರಾಂಪುರದ ಬಸವರಾಜ್, ಕಾರ್ಯಾಧ್ಯಕ್ಷ ಪರಶುರಾಮ ರೆಡ್ದಿ, ಪ್ರಧಾನ ಕಾರ್ಯದರ್ಶಿ ಅಣಬೇರು ಕುಮಾರಸ್ವಾಮಿ ಮತ್ತಿತರರು ಹಾಜರಿದ್ದರು