ದಾವಣಗೆರೆ, ಫೆ. 14- ಕೇಂದ್ರ ಸರ್ಕಾರದ ಜನವಿರೋಧಿ ಬಜೆಟ್, ಅದಾನಿಯ ಹಗರಣಗಳ ಆರೋಪ ಕುರಿತು ಸಮಗ್ರ ತನಿಖೆ ನಡೆಸುವಂತೆ ರಾಷ್ಟ್ರಪತಿಗಳನ್ನು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮಂಡಳಿ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿ, ಉಪವಿಭಾಗಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಸಹ ಕಾರ್ಯದರ್ಶಿ ಆವರಗೆರೆ ಹೆಚ್.ಜಿ. ಉಮೇಶ್ ಅವರು, ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಜನ ವಿರೋಧಿಯಾಗಿದ್ದು, ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಾದ ನಿರುದ್ಯೋಗ, ಬಡತನ, ಬೆಲೆಯೇರಿಕೆ ತಡೆಗಟ್ಟುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಬಂಡವಾಳಶಾಹಿಗಳ ಹಾಗೂ ಕಾರ್ಪೊರೇಟ್ ವಲಯಗಳ ಹಿತಕಾಯುವು ದೇ ಪ್ರಥಮ ಆದ್ಯತೆಯನ್ನಾಗಿಸಿಕೊಂಡಿರುವ ಬಿಜೆಪಿ ಸರ್ಕಾರ ಶಿಕ್ಷಣ, ಆರೋಗ್ಯ ಕ್ಷೇತ್ರ ಗಳ ಖಾಸಗೀಕರಣ ಮಾಡಲು ಮುಂದಾಗಿ ದ್ದು, ಈ ಕ್ಷೇತ್ರಗಳಿಗೆ ಅನುದಾನವನ್ನು ಸಹ ಕಡಿತಗೊಳಿಸಿದೆ. ಐಸಿಎಂಆರ್ ಲ್ಯಾಬ್ ಹಾಗು ನರ್ಸಿಂಗ್ ಕಾಲೇಜುಗಳನ್ನು ಖಾಸಗಿ ವಲಯಕ್ಕೆ ವಹಿಸಲು ನಿರ್ಧರಿಸಿದೆ ಎಂದು ಕಿಡಿಕಾರಿದರು.
ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ, ಅಸಂಘಟಿತ ಕಾರ್ಮಿಕರ ಸಾಮಾಜಿಕ ಸುರಕ್ಷೆ, ಉದ್ಯೋಗ ವೇತನಗಳ ಬಗ್ಗೆ ದಿವ್ಯ ಮೌನ ವಹಿಸಿರುವ ಕೇಂದ್ರ ಸರ್ಕಾರ, ಗ್ರಾಮೀಣ ಉದ್ಯೋಗ ಖಾತ್ರಿಯಂತಹ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡದೇ ನಿರ್ಲಕ್ಷ್ಯಿಸಿದೆ ಎಂದರು.
ಕೂಡಲೇ ಕೇಂದ್ರ ಸರ್ಕಾರ ಅದಾನಿ ಸಮೂಹ ಸಂಸ್ಥೆಗಳ ಮೇಲೆ ಮಾಡಲಾಗಿರುವ ಆರೋಪಗಳ ಬಗ್ಗೆ ಸುಪ್ರಿಂಕೋರ್ಟ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರಾದ ಆವರಗೆರೆ ಚಂದ್ರು, ಆನಂದರಾಜ್, ಆವರಗೆರೆ ವಾಸು, ಶಿವಕುಮಾರ್ ಆರ್. ಶೆಟ್ಟರ್, ಎಸ್.ಎಂ. ಸಿದ್ಧಲಿಂಗಪ್ಪ, ನರೇಗಾ ರಂಗನಾಥ್, ಎಸ್.ಎಸ್. ಮಲ್ಲಮ್ಮ, ಸರೋಜ, ಯರಗುಂಟೆ ಸುರೇಶ್, ಶರಣಪ್ಪ ಶ್ಯಾಗಲೆ, ಉಮಾಪತಿ, ಚಮನ್ ಸಾಬ್ ಮತ್ತಿತರರು ಭಾಗವಹಿಸಿದ್ದರು.