ಅಪರೂಪದ ವ್ಯಕ್ತಿತ್ವದ ಪ್ರೊ. ಹನುಮಪ್ಪ

ಅಪರೂಪದ ವ್ಯಕ್ತಿತ್ವದ ಪ್ರೊ. ಹನುಮಪ್ಪ

ದಾವಣಗೆರೆ, ಫೆ. 12-  ಸರ್ಕಾರಿ ನಿಯಮಗಳನ್ನು ಅಕ್ಷರಶ: ಪಾಲಿಸುತ್ತಿದ್ದ ಹಾಗೂ ಸರ್ಕಾರದ ಕೆಲಸ ದೇವರ ಕೆಲಸವೆಂದು ನಂಬಿ ಬದುಕು ಸಾಗಿಸಿದ ದಿ. ಪ್ರೊ. ಹನುಮಪ್ಪ ಅವರದು ಅಪರೂಪದ ವ್ಯಕ್ತಿತ್ವ ಎಂದು ವಿಶ್ರಾಂತ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಕಲಮರಹಳ್ಳಿ ಬಣ್ಣಿಸಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕೆಳಗಳಮನೆ ಬೋಸಯ್ಯ ಪುಸ್ತಕ ಮಾಲೆ ದಾವಣಗೆರೆ ಹಾಗೂ ಪ್ರೊ. ಹನುಮಪ್ಪ ಅಭಿಮಾನಿ ಬಳಗ ಮಾಯಕೊಂಡ ಇವರ ಸಂಯುಕ್ತಾಶ್ರಯದಲ್ಲಿ ಇಂದು ಹಮ್ಮಿಕೊಂಡಿದ್ದ ದಿ. ಪ್ರೊ. ಹನುಮಪ್ಪ ಅವರ ಕುರಿತ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬೆಂಗಳೂರು ವಿಧಾನಸೌಧದ ಮೇಲೆ ಬರೆದಿರುವ `ಸರ್ಕಾರಿ ಕೆಲಸ ದೇವರ ಕೆಲಸ’ ಎಂಬ ಘೋಷ ವಾಕ್ಯವನ್ನು ಅಕ್ಷರಶಃ ಪಾಲಿ ಸಿದ ಕೀರ್ತಿ ಪ್ರಾಂಶುಪಾಲರಾಗಿದ್ದ ದಿ. ಪ್ರೊ. ಹನುಮಪ್ಪ ಅವರಿಗೆ ಸಲ್ಲುತ್ತದೆ ಎಂದರು.

ಸರ್ಕಾರ ರೂಪಿಸಿದ 32 ನಿಯಮಗಳನ್ನು ಶೇ. 50 ರಷ್ಟು ಪಾಲಿಸದೇ ಇರುವುದು ವಿಷಾದದ ಸಂಗತಿ. ಆದರೆ ಇದಕ್ಕೆ ಅಪವಾದ ಎನ್ನುವಂತೆ ಪ್ರೊ. ಹನುಮಪ್ಪ ಅವರು ಚಾಚೂ ತಪ್ಪದೇ ಸರ್ಕಾರದ ಎಲ್ಲಾ ನಿಯ ಮಗಳನ್ನು ಪಾಲಿಸುತ್ತಿದ್ದರು. ಕುಟುಂಬವನ್ನು ಮರೆತು ಸರ್ಕಾರಿ ಕೆಲಸ ದೇವರ ಕೆಲಸವೆಂದು ಭಾವಿಸಿದ್ದರು. ಅವರದು ಆದರ್ಶ ವ್ಯಕ್ತಿತ್ವ ಎಂದು ಕೊಂಡಾಡಿದರು. 

ಇಂತಹ ಜನಸ್ನೇಹಿ ಪ್ರಾಂಶುಪಾಲರು, ಪ್ರಾಧ್ಯಾಪಕರನ್ನು ಗುರುತಿಸಿ ಸರ್ಕಾರದಿಂದ ಕೊಡಲ್ಪಡುವ `ಸೇವಾ ರತ್ನ’ ಪ್ರಶಸ್ತಿ ಇವರಿಗೆ ಲಭಿಸದಿರುವುದು ಬೇಸರದ ಸಂಗತಿಯಾಗಿದೆ. ಆದರೆ ಅವರ ಅಭಿಮಾನಿಗಳು ಸಂಸ್ಮರಣಾ ಸಮಾರಂಭ ಏರ್ಪಡಿಸುವ ಮೂಲಕ ಅವರ ಸೇವೆಯನ್ನು ಸ್ಮರಿಸುತ್ತಿರುವುದು ಸರ್ಕಾರದ ಪ್ರಶಸ್ತಿಗಿಂತ ಮಿಗಿಲಾದುದು ಎಂದು ಅಭಿಮಾನಿಗಳ ಕಾರ್ಯವನ್ನು ಪ್ರಶಂಸಿಸಿದರು.

ಅಭಿನಂದನಾ ಗ್ರಂಥ ಬಿಡುಗಡೆ ಮಾಡಿದ ವಿಶ್ರಾಂತ ಪ್ರಾಚಾರ್ಯ ಪ್ರೊ.ಜಿ. ವಿಶ್ವೇಶ್ವರಪ್ಪ ಮಾತನಾಡಿ ಸರಳ, ಸಜ್ಜನಿಕೆಯ, ಮೃದು ಸ್ವಭಾವದ ಪ್ರೊ.ಹನುಮಪ್ಪ ಅವರಿಗೆ ಮಾಯಕೊಂಡ ಶರೀರವಾಗಿದ್ದರೆ, ಕಾಲೇಜು ಆತ್ಮವಾಗಿತ್ತು. ಅವರ ಕರ್ತವ್ಯ ನಿಷ್ಠೆ ಮೆಚ್ಚುವಂತಹದ್ದು, ಕ್ರಿಯಾಶೀಲ ವ್ಯಕ್ತಿತ್ವದ ಅವರು ಪೂಜೆಗೆ ಅರ್ಹರು ಮತ್ತು ಹುತಾತ್ಮರು ಎಂದು ಬಣ್ಣಿಸಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಪ್ರೊ. ಹನುಮಪ್ಪ ಅವರದು ಆದರ್ಶ ವ್ಯಕ್ತಿತ್ವ. ಅವರ ಸೇವೆ ಅನುಕರಣೀಯ. ಅವರ ಜೀವನ ಮಾದರಿಯಾದುದು ಎಂದು ಹೇಳಿದರು.

ಸತ್ತ ಮೇಲೆ ಯಾವುದೇ ವ್ಯಕ್ತಿಯ ಒಳಿತು, ಕೆಡಕುಗಳನ್ನು ಬಣ್ಣನೆ ಮಾಡುತ್ತಾರೆ. ಹುಟ್ಟು ಮತ್ತು ಸಾವಿನ ನಡುವಿನ ಜೀವಿತ ಅವಧಿಯಲ್ಲಿ ಸಾಧಿಸುವುದೇ ನಿಜವಾದ ಸಾಧನೆ ಎಂದರು.

ನಿವೃತ್ತ ಪೊಲೀಸ್ ಅಧೀಕ್ಷಕ ಎನ್. ರುದ್ರಮುನಿ, ಪುಸ್ತಕ ಸಂಪಾದಕ ಬಿ.ಟಿ.ಬೆಳಗಟ್ಟ (ತಿಪ್ಪೇಸ್ವಾಮಿ), ಪ್ರೊ. ಮಂಜಣ್ಣ, ಪತ್ರಕರ್ತ ಜಗದೀಶ್ ದಿ. ಪ್ರೊ. ಹನುಮಪ್ಪ ಅವರ ಸೇವೆಯನ್ನು ಶ್ಲ್ಯಾಘಿಸಿದರು.

ಸಿದ್ದೇಶ್ ಸೊಕ್ಕೆ ಪ್ರಾರ್ಥಿಸಿದರು. ಪ್ರಾಂಶುಪಾಲ ಪ್ರೊ. ಎನ್.ಎಂ. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿ.ಎಸ್. ಈಶ್ವರಪ್ಪ, ರಾಜಣ್ಣ, ಬಸವರಾಜಪ್ಪ ಮತ್ತಿತರರಿದ್ದರು. 

error: Content is protected !!