ಮಾದರಿ ಕಾಮಗಾರಿಯ ಬಗ್ಗೆ ಗ್ರಾಮಸ್ಥರ ಹರ್ಷ
ಮಲೇಬೆನ್ನೂರು, ಫೆ.12- ಹರಳಹಳ್ಳಿ ಗ್ರಾಮದಲ್ಲಿ ಸುಮಾರು 18 ಎಕರೆ ವಿಸ್ತೀರ್ಣದಲ್ಲಿರುವ ಕೆರೆ ಬಹಳ ವರ್ಷಗಳಿಂದ ಅಭಿವೃದ್ಧಿ ಕಾಣದೇ ಜಾಲಿಮುಳ್ಳು, ಗಿಡ-ಗಂಟೆಗಳಿಂದ ಹೂಳು ತುಂಬಿಕೊಂಡಿತ್ತು.
ಈ ಕೆರೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ “ನಮ್ಮೂರು ನಮ್ಮ ಕೆರೆ” ಕಾರ್ಯಕ್ರಮದಡಿ ಶ್ರೀ ಆಂಜನೇಯ ಸ್ವಾಮಿ ಕೆರೆ ಸಮಿತಿ ಸಹಯೋಗದಲ್ಲಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಕೆರೆಯ ಹೂಳು ತೆಗೆಸಿ ಸ್ವಚ್ಛ ಮಾಡಿಸುವ ಮೂಲಕ ಎಲ್ಲರ ಗಮನ ಸೆಳೆಯಲಾಗಿದೆ.
ಕಳೆದ ತಿಂಗಳು ಅಂದರೆ ಜನವರಿ 6 ರಂದು ಕೆರೆ ಹೂಳೆತ್ತುವ ಕಾಮಗಾರಿಗೆ ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ್ ಅವರು ಸ್ಥಳೀಯ ರೈತರ ಸಮ್ಮುಖದಲ್ಲಿ ಪೂಜೆ ಸಲ್ಲಿಸಿ ಚಾಲನೆ ನೀಡಿದ್ದರು.
ಕೇವಲ ಒಂದೇ ತಿಂಗಳಲ್ಲಿ ಜೆಸಿಬಿ, ಇಟಾಚಿಗಳನ್ನು ಬಳಸಿ ಗ್ರಾಮದ ರೈತರ ಟ್ರ್ಯಾಕ್ಟರ್‌ಗಳನ್ನು ಬಳಸಿಕೊಂಡು ಕೆರೆಯನ್ನು ಸ್ವಚ್ಛಗೊಳಿಸಿ ಕೆರೆಯಲ್ಲಿ ಹೆಚ್ಚಿನ ಪ್ರಮಾಣ ನೀರು ಸಂಗ್ರಹವಾಗಿ ಅಂತರ್ಜಲ ಪ್ರಮಾಣ ಹೆಚ್ಚಾಗುವಂತೆ ಮಾಡಲಾಗಿದೆ ಎಂದು ಧರ್ಮಸ್ಥಳ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಅವರು ಸ್ಥಳಕ್ಕೆ ಭೇಟಿ ನೀಡಿದ್ದ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಈ ಕಾಮಗಾರಿಯಲ್ಲಿ ಜೆಸಿಬಿ 550 ಗಂಟೆಗೂ ಹೆಚ್ಚು ಕಾಲ ಕೆಲಸ ಮಾಡಿದ್ದು 18,760 ಟ್ರ್ಯಾಕ್ಟರ್ ಲೋಡ್ ಕೆರೆಯ ಹೂಳನ್ನು ಹರಳಹಳ್ಳಿ, ಹಾಲಿವಾಣ, ಮಲ್ಲನಾಯ್ಕನಹಳ್ಳಿ, ಮಲೇಬೆನ್ನೂರು, ಕೊಪ್ಪ ಮತ್ತಿತರ ಗ್ರಾಮಗಳ ಬಂದು ಸಾವಿರಕ್ಕೂ ಹೆಚ್ಚು ರೈತರು ತಮ್ಮ ತೋಟಗಳಿಗೆ ತೆಗೆದುಕೊಂಡು ಹೋಗಿದ್ದಾರೆ.
ಒಟ್ಟು 10 ಲಕ್ಷ ರೂ. ಅನುದಾನದಲ್ಲಿ ಈಗಾಗಲೇ 8.54 ಲಕ್ಷ ರೂ. ಖರ್ಚಾಗಿದ್ದು, ಉಳಿದ ಹಣದಲ್ಲಿ ಕೆರೆಯ ಕೋಡಿ ಕಟ್ಟೆ ನಿರ್ಮಿಸಿ ಗೇಟ್ ಅಳವಡಿಸಲಾಗುವುದು. ಜೊತೆಗೆ ಕೆರೆ ಏರಿ ಅಭಿವೃದ್ಧಿಪಡಿಸಿ ಪಾದಚಾರಿಗಳ ಓಡಾಟಕ್ಕೂ ಅನುಕೂಲ ಮಾಡಲಾಗುವುದು. ಕೆರೆ ಏರಿಯ ರಸ್ತೆಯ ಅಕ್ಕ-ಪಕ್ಕದಲ್ಲಿ ಗಿಡಗಳನ್ನು ನೆಟ್ಟು, ಕಲ್ಲಿನ ಕುರ್ಚಿಗಳನ್ನು ಹಾಕುವ ಉದ್ದೇಶವಿದೆ ಎಂದು ವಸಂತ್ ದೇವಾಡಿಗ ತಿಳಿಸಿದರು.
15 ಕೆರೆ ಅಭಿವೃದ್ಧಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜನರ ಸಹಭಾಗಿತ್ವದಲ್ಲಿ ರಾಜ್ಯದಲ್ಲಿ 427 ಕೆರೆಗಳಿಗೆ ಹೊಸ ರೂಪ ನೀಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಇದುವರೆಗೆ 15 ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು, ಸುಮಾರು 1 ಕೋಟಿ ರೂ. ಅನುದಾನವನ್ನು ಯೋಜನೆಯಿಂದ ನೀಡಲಾಗಿದೆ.
ಹರಿಹರ ತಾಲ್ಲೂಕಿನಲ್ಲಿ ಈ ಹಿಂದೆ ಜಿ.ಟಿ. ಕಟ್ಟೆ ಗ್ರಾಮದ ಕೆರೆಯನ್ನು ಅಭಿವೃದ್ಧಿ ಪಡಿಸಿದ್ದು, ಇದೀಗ ಹರಳಹಳ್ಳಿ ಗ್ರಾಮದ ಕೆರೆಗೆ ಕಾಯಕಲ್ಪ ನೀಡಲಾಗಿದೆ. ಕೆರೆ ಹೂಳು ತೆಗೆಸುವ ಕಾಮಗಾರಿಗಳನ್ನು ಕೈಗೆತ್ತಿಕೊಂಡ ಎಲ್ಲಾ ಕಡೆಗಳಲ್ಲಿ ಸ್ಥಳೀಯರ ಸಹಕಾರ ನಿರೀಕ್ಷೆಗೂ ಮೀರಿ ಸಿಕ್ಕಿರುವುದರಿಂದ ಡಾ. ವೀರೇಂದ್ರ ಹೆಗ್ಗಡೆಯವರ ಉದ್ದೇಶ ಸಫಲತೆ ಕಂಡಿದೆ ಎಂದು ಜಿಲ್ಲಾ ನಿರ್ದೇಶಕ ವಿಜಯ ಕುಮಾರ್ ನಾಗರಾಳ್ `ಜನತಾವಾಣಿ’ಗೆ ತಿಳಿಸಿದರು.
ಇನ್ನೊಷ್ಟು ಕಾಮಗಾರಿ : ಹರಳಹಳ್ಳಿ ಗ್ರಾಮದ ಕೆರೆಗೆ ಇನ್ನೊಷ್ಟು ಕಾಮಗಾರಿ ಕೈಗೆತ್ತಿಕೊಳ್ಳಲು ಉದ್ಯೋಗ ಖಾತ್ರಿ ಯೋಜನೆಯಡಿ ಕ್ರಿಯಾಯೋಜನೆ ಸಿದ್ಧಪಡಿಸುವುದಾಗಿ ಪತ್ರಕರ್ತರಿಗೆ ತಿಳಿಸಿದ ಶಾಂತಪ್ಪ ಅವರು, ಈ ಕೆರೆಯ ನೀರನ್ನು ಕುಡಿಯುವ ನೀರಿನ ಯೋಜನೆಗೆ ಬಳಕೆ ಮಾಡುವ ಉದ್ದೇಶವಿದ್ದು, ಕೆರೆಯಲ್ಲಿ ಮೀನು ಸಾಕಾಣಿಕೆಗೆ ಒತ್ತು ನೀಡಲಾಗುವುದೆಂದರು.
ಈ ವೇಳೆ ಮಾತನಾಡಿದ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮುದ್ದೇರ ಕರಿಬಸಪ್ಪ, ಚಿಕ್ಕೋಳ್ ಕೃಷ್ಣಪ್ಪ, ಏಳೂರು ಕರಿಬಸಪ್ಪ, ಹನುಮಂತಪ್ಪ ಮತ್ತಿರರರು ಸರ್ಕಾರದ ಅನುದಾನ ಎಷ್ಟೇ ಲಕ್ಷ ಗಳಾಗಿದ್ದರೂ ಈ ರೀತಿಯ ಗುಣಮಟ್ಟದ ಕೆಲಸ ಆಗುತ್ತಿರಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆರೆ ಹೂಳೆತ್ತುವ ಕಾಮಗಾರಿಯ ಉಸ್ತುವಾರಿ ವಹಿಸಿರುವ ಯೋಜನೆಯ ಕೃಷಿ ಅಧಿಕಾರಿ ಗಂಗಾಧರ್, ಗ್ರಾಮದ ರಂಗನಾಥ್, ಕೃಷ್ಣಪ್ಪ, ಅಣ್ಣಪ್ಪ, ರವಿಕುಮಾರ್, ಬೆಳ್ಳೂಡಿ ರಾಜಪ್ಪ, ಹಾಲಿವಾಣದ ಶಿವಕ್ಳ ಆಂಜನೇಯ ಮತ್ತಿತರರು ಈ ವೇಳೆ ಹಾಜರಿದ್ದರು.