ಆಲೂರು ಗ್ರಾಮ ರೈತ ತರಬೇತಿ ಕಾರ್ಯಕ್ರಮದಲ್ಲಿ ಬೇಸಾಯ ತಜ್ಞ ಮಲ್ಲಿಕಾರ್ಜುನ್
ದಾವಣಗೆರೆ, ಫೆ.10- ಸಂಪನ್ಮೂಲ ಸಂಸ್ಥೆಯಾದ ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರ ಮತ್ತು ಹಿರೇಕೋಗಲೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ವತಿಯಿಂದ ಚನ್ನಗಿರಿ ತಾಲ್ಲೂಕು ಆಲೂರು ಗ್ರಾಮದಲ್ಲಿ ಪ್ರಧಾನ ರೈತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಅಮೃತ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷ ಶಿವಕುಮಾರ ಹಾಗೂ ನಿರ್ದೇಶಕರುಗಳು ತರಬೇತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಬೇಸಾಯ ತಜ್ಞ ಬಿ. ಓ. ಮಲ್ಲಿಕಾರ್ಜುನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಂಪನಿ ಸ್ಥಾಪನೆಯಾಗಿ ಒಂದು ವರ್ಷ ಕಳೆದಿದ್ದು ನಾವು ಮುಂಬರುವ ದಿನಗಳಲ್ಲಿ ತೆಂಗಿನ ಉಪ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡಿದರೆ ಮಾತ್ರ ಕಂಪನಿ ಹೆಚ್ಚು ಲಾಭ ಗಳಿಸುತ್ತದೆ ಮತ್ತು ರೈತರಿಗೆ ಅನುಕೂಲವಾಗುತ್ತದೆ ಎಂದರು.
ತೋಟಗಾರಿಕೆ ತಜ್ಞ ಎಂ.ಜಿ. ಬಸವನಗೌಡ ಮಾತನಾಡುತ್ತಾ, ಅಡಿಕೆ ಬೆಳೆಯ ವಿಸ್ತರಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರೈತರು ಸರಿಯಾದ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ ತೋಟಗಳು ಅನೇಕ ರೋಗಗಳಿಗೆ ತುತ್ತಾಗಿ ಇಳುವರಿ ಕುಂಠಿತವಾಗುತ್ತದೆ ಎಂದು ತಿಳಿಸಿದರು.
ರೈತರಿಗೆ ಸಮಗ್ರ ನೀರು ನಿರ್ವಹಣೆ, ಕೀಟ ಮತ್ತು ಪೋಷಕಾಂಶಗಳ ನಿರ್ವಹಣೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಒದಗಿಸಿದರು. ರೈತರ ಅನೇಕ ಪ್ರಶ್ನೆಗಳಿಗೆ ವಿಜ್ಞಾನಿಗಳು ತಾಳ್ಮೆಯಿಂದ ಉತ್ತರ ನೀಡಿದರು.
ಎನ್.ಆರ್.ಆಕಾಶ್ ಕಾರ್ಯಕ್ರಮ ನಿರೂಪಿಸಿದರು, ಶಶಿಕಲಾ ಸ್ವಾಗತಿಸಿದರು. ಕಂಪನಿಯ ಸಿಇಓ ವಿನಯ್ ಕುಮಾರ್, ಉಪಾಧ್ಯಕ್ಷ ಜಗದೀಶ್, ನಿರ್ದೇಶಕರಾದ ಚಂದ್ರಪ್ಪ, ಮಲ್ಲಿಕಾರ್ಜುನ್, ಭರತ್ ರಾಜ್, ಗಣೇಶಪ್ಪ, ಯಶೋಧಮ್ಮ, ಶಶಿಕಲಾ, ತಿಪ್ಪೇಸ್ವಾಮಿ ಹಾಗೂ ಅಕ್ಕಪಕ್ಕದ ಗ್ರಾಮದ ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.