ಹೊನ್ನಾಳಿ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ವ್ಯಾಕುಲತೆ
ಹೊನ್ನಾಳಿ, ಫೆ. 10- ಅಭಿವೃದ್ಧಿಯ ನೆಪದಲ್ಲಿ ಪರಿಸರ ನಾಶವಾಗುತ್ತಿದ್ದು, ಇದರಿಂದ ಮಾನವ ಕುಲಕ್ಕೆ ಮುಂದೆ ಭಾರೀ ಗಂಡಾಂತರ ಎದುರಾಗಲಿದೆ ಎಂದು ವೃಕ್ಷಮಾತೆ, ಪರಿಸರ ರಾಯಭಾರಿ, ಪದ್ಮಶ್ರೀ ನಾಡೋಜ ಸಾಲುಮರದ ತಿಮ್ಮಕ್ಕ ಆಕ್ರೋಶ ವ್ಯಕ್ತಪಡಿಸಿದರು.
ಅವರು ಪಟ್ಟಣದ ದುರ್ಗಿಗುಡಿ 3 ನೇ ಕ್ರಾಸ್‍ನ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಸಸಿ ನೆಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಸ್ತೆ ಮತ್ತಿತರೆ ಕಾಮಗಾರಿಗಳ ಅಭಿವೃದ್ಧಿ ನೆಪದಲ್ಲಿ ಹಲವಾರು ವರ್ಷಗಳಿಂದ ಮರಗಳ ಮಾರಣ ಹೋಮ ನಡೆಯುತ್ತಿದ್ದು ಸರ್ಕಾರವು ತೆರವು ಮಾಡಿದ ಮರಗಳ ಬದಲಾಗಿ ಪರ್ಯಾಯವಾಗಿ ಗಿಡ-ಮರಗಳನ್ನು ಬೆಳೆಸುವತ್ತ ಗಂಭೀರವಾಗಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಶಾಲಾ-ಕಾಲೇಜುಗಳ ವಿದ್ಯಾರ್ಥಿ ಗಳಿಗೆ ಪರಿಸರ ನಾಶದ ಬಗ್ಗೆ ಆಗಲಿರುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಬೇಕು. ಪ್ರತೀ ಗ್ರಾಪಂ ವ್ಯಾಪ್ತಿಯಲ್ಲಿ ಮನೆಗೊಂದು ಮರವನ್ನು ಬೆಳೆಸುವತ್ತ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋರಿ ಯೋಗೀಶ್ ಕುಳ ಗಟ್ಟೆ ಮಾತನಾಡಿ, ಸಾಲುಮರದ ತಿಮ್ಮಕ್ಕ ಅವರು ಹುಲಿಕಲ್ ಮತ್ತು ಕುದೂರು ನಡುವಿನ 45 ಕಿಲೋ ಮೀಟರ್ ಹೆದ್ದಾರಿ ಯುದ್ದಕ್ಕೂ 385 ಆಲದ ಮರಗಳನ್ನು ನೆಟ್ಟು ಪೋಷಿಸುವ ಸಾರ್ಥಕ ಕೆಲಸವನ್ನು ಮಾಡಿದ್ದಾರೆ ಎಂದು ಶ್ಲಾಘಿಸಿದರು.
ತನಗೆ ಮಕ್ಕಳಾಗದಿದ್ದಾಗ ತನ್ನ ಪತಿಯವರ ಸಹಾಯ ಹಸ್ತದೊಂದಿಗೆ 8000 ಕ್ಕೂ ಹೆಚ್ಚು ಇತರೆ ಮರಗಳನ್ನು ನೆಟ್ಟು ಬೆಳೆದ ಮರಗಳಲ್ಲಿ ಮಕ್ಕಳ ಪ್ರತಿ ರೂಪವನ್ನು ನೋಡಿದ ಮಾತೃ ಹೃದಯಿಗೆ ಇತ್ತೀಚೆಗೆ ಸರ್ಕಾರವು ಅವರ ಸೇವಾ ಕಾರ್ಯವನ್ನು ಗುರುತಿಸಿ ಕ್ಯಾಬಿನೆಟ್ ದರ್ಜೆಯ ಸ್ಥಾನ-ಮಾನವನ್ನು ನೀಡಿ ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿಯನ್ನಾಗಿ ನೇಮಿಸಿರುವುದಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಸಂಸ್ಥೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸಿದರು.
ಆರ್ಯಭಟ ಅಬಾಕಸ್ ಅಕಾಡೆಮಿಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಭಾರತೀಯ ಅಯ್ಯಪ್ಪ ಸೇವಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಳ್ಳೂರ್ ಉಮೇಶ್, ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ನ್ಯಾಮತಿ ತಾಲ್ಲೂಕು ಅಧ್ಯಕ್ಷ ಬಿ.ಎಚ್.ಉಮೇಶ್, ರೈತ ಮುಖಂಡರುಗಳಾದ ಎ.ಪಿ.ನಾಗರಾಜಪ್ಪ, ಕೋರಿ ನಂಜಪ್ಪ, ಕೋರಿ ಸೋಮಶೇಖರಪ್ಪ, ಅಗಸೆಬಾಗಿಲ ರಾಜಪ್ಪ, ನ್ಯಾಮತಿ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿಯ ಮುಖಂಡ ಮಹೇಶ್ ಆಚಾರ್ ಆರುಂಡಿ, ಹಾಲೇಶ್ ನ್ಯಾಮತಿ, ಅಪ್ಪು ಅಭಿಮಾನಿ ಬಳಗದ ಮುಖಂಡ ಜಿ.ಬಸವನಗೌಡ, ಸಮಾಜ ಸೇವಕ ಕಡೆಮನಿ ರಾಮಚಂದ್ರಪ್ಪ, ಸಂಸ್ಥೆಯ ಮಹಿಳಾ ವಿಭಾಗದ ಪದಾಧಿಕಾರಿಗಳಾದ ಅನಿತಾ ಯೋಗೀಶ್, ಪದ್ಮಾ, ಹೆಚ್.ಕೆ.ವೀಣಾ ಮತ್ತಿತರರು ಉಪಸ್ಥಿತರಿದ್ದರು.