ವಾಲ್ಮೀಕಿ ಜಾತ್ರೆಯ ಜನ ಜಾಗೃತಿ ಸಮಾವೇಶದಲ್ಲಿ ಮಾಜಿ ಸಿ.ಎಂ. ಸಿದ್ಧರಾಮಯ್ಯ ಕರೆ
ಮಲೇಬೆನ್ನೂರು, ಫೆ.9 – ಸಂವಿಧಾನ ಬದಲಾವಣೆಗೆ ಯಾರೇ ಕೈ ಹಾಕಿದರು ಅವರ ವಿರುದ್ಧ ಶೂದ್ರರೆಲ್ಲರೂ ಒಂದಾಗಿ ವಿರೋಧಿಸಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕರೆ ನೀಡಿದರು.
ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಇಂದು ಹಮ್ಮಿಕೊಂಡಿದ್ದ 5ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರೆಯ ಜನ ಜಾಗೃತಿ ಸಮಾವೇಶದಲ್ಲಿ ಡಾ.ಜೆ. ಕರಿಯಪ್ಪ ಮಾಳಗಿ ಸಂಪಾದಕತ್ವದ “ವಾಲ್ಮೀಕಿ ವಿಜಯ” ಸ್ಮರಣ ಸಂಪುಟ ಬಿಡುಗಡೆ ಮಾಡಿ ಮಾತನಾಡಿದರು.
ಸಂವಿಧಾನದಿಂದಲೇ ನಾವು-ನೀವು ಓದಲು, ಅಧಿಕಾರ ಪಡೆಯಲು ಸಾಧ್ಯಾವಾಯಿತು.ಅಂತಹ ಸಂವಿಧಾನವನ್ನು ನಾವೆಲ್ಲರೂ ಸೇರಿ ರಕ್ಷಣೆ ಮಾಡಬೇಕೆಂದರು. ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ, ಸಂಘಟನೆ, ಹೋರಾಟಗಳನ್ನು ಎಲ್ಲರೂ ಧೈರ್ಯವಾಗಿಸಿಕೊಂಡು ಮುಂದೆ ಸಾಗೋಣ, ಈ ನಿಟ್ಟಿನಲ್ಲಿ ಶ್ರೀಗಳ ಸಂದೇಶವನ್ನು ನೀವು ಸ್ವೀಕರಿಸಿ ಅನುಸರಿಸಿದಾಗ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂದರು.
ಈಗ ಲೋಕಸಭೆ ಅಧಿವೇಶನ ನಡೆಯತ್ತಿದ್ದು, ಮೀಸಲಾತಿ ಹೆಚ್ಚಳವನ್ನು ಸಂವಿಧಾನದ 9ನೇ ಷೆಡೂಲ್ಗೆ ಒಳಪಡಿಸಬೇಕೆಂದು ಸಿದ್ಧರಾಮಯ್ಯ ಆಗ್ರಹಿಸಿದರು.
ಯಾರೂ ಕೇಳದಿದ್ದರೂ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10% ರಷ್ಟು ಮೀಸಲಾತಿಯನ್ನು ಇದ್ದಕ್ಕಿದಂತೆ ಜಾರಿ ತಂದರು. ಇದಕ್ಕೆ ನಮ್ಮ ವಿರೋಧವಿಲ್ಲ ಆದರೆ ಅದರಂತೆ ಇದನ್ನು 9ನೇ ಷೆಡ್ಯೂಲ್ಗೆ ಸೇರಿಸಿ ಜಾರಿಗೋಳಿಸಬೇಕೆಂದು ಆಗ್ರಹಿಸದರು.
ನಮ್ಮ ಸರ್ಕಾರ ಇದ್ದಾಗ ಅಭಿವೃದ್ಧಿಗೆ ಖರ್ಚಾಗುವ ಹಣದಲ್ಲಿ ಶೇ. 24,14 ರಷ್ಟು ಹಣವನ್ನು ಎಸ್ಸಿ-ಎಸ್ಟಿ ನೌಕರರಿಗೆ ಬಡ್ತಿ ಮೀಸಲಾತಿ ಮಾಡುವ ಮೂಲಕ ದೇಶದಲ್ಲಿ ಎಲ್ಲೂ ಆಗದ ಕಾನೂನುಗಳನ್ನು ನಾವು ಜಾರಿಗೋಳಿಸಿದ್ದೇವು.
ರಾಮಾಯಣದ ಮೂಲಕ ರಾಮನ್ನು ಬೆಳಕಿಗೆ ತಂದ ವಾಲ್ಮೀಕಿಯನ್ನು ಮತ್ತು ಮಹಾಭಾರತದ ಮೂಲಕ ಕೃಷ್ಣನನ್ನು ಬೆಳಕಿಗೆ ತಂದ ವ್ಯಾಸರನ್ನು ಮಾತ್ರ ಯಾರೂ ಪೂಜಿಸುತ್ತಿಲ್ಲ. ಎಲ್ಲರೂ ರಾಮ, ಕೃಷ್ಣರನ್ನು ಮಾತ್ರ ಪೂಜಿಸುತ್ತಾರೆ. ಇಂತಹ ತಾರತಮ್ಯ ಕೆಟ್ಟ ವ್ಯವಸ್ಥೆ ಹೋಗದ ಹೋರತು ನಮ್ಮ ಸಮಾಜ ಸಾಧ್ಯವಿಲ್ಲ ಎಂದೂ ಸಿದ್ಧರಾಮಯ್ಯ ಹೇಳಿದರು.
ದೇಶದಲ್ಲಿ 50ಕ್ಕೂ ಹೆಚ್ಚು ಬುಡಕಟ್ಟು ಸಮಾಜಗಳಿದ್ದು, ಅದರಲ್ಲಿ ವಾಲ್ಮೀಕಿ ಸಮೂದಾಯದ ಬುಡಕಟ್ಟು ಬಹಳ ದೊಡ್ಡದು, ಇಂತಹ ಬುಡಕಟ್ಟು ಸಮಾಜದಲ್ಲಿ ಜನಿಸಿದ ವಾಲ್ಮೀಕಿ ಅವರು ರಾಮಾಯಣದ ಮೂಲಕ ಜಗತ್ತಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಿಕೋಟ್ಟರು .
ಭಕ್ತಿಯಲ್ಲಿ ಬೇಡರ ಕಣ್ಣಪ್ಪ, ಏಕಲವ್ಯ ಅವರು ಇಂದಿಗೂ ಮಾದರಿಯಾಗಿದ್ದಾರೆ. ನಾಡು ನುಡಿಗಾಗಿ ಹಲಗಲಿ ಬೇಡರು , ಸುರಪುರದ ರಾಜರು, ಚಿತ್ರದುರ್ಗದ ಪಾಳೇಗಾರರ ಹೋರಾಟ ಬಹಳ ದೊಡ್ಡದಾಗಿದೆ.
ಇಂತಹ ಬಹುದೊಡ್ಡ ಇತಿಹಾಸ ಹೊಂದಿರುವ ಈ ಸಮಾಜವನ್ನು ಲಿಂಗೈಕ್ಯ ಶ್ರೀ ಪುಣ್ಯಾನಂದಪುರಿ ಶ್ರೀಗಳು ಸಂಘಟಿಸಿದ್ದರು. ಅವರ ನಂತರ ಈಗಿನ ಪ್ರಸನ್ನಾನಂದ ಶ್ರೀಗಳು ಬದ್ಧತೆಯಿಂದ ಸಮಾಜವನ್ನು ಸಧೃಡಗೊಳಿಸುವ ಕೆಲಸ ಮಾಡುತ್ತಿದ್ದಾರೆ. ವಾಲ್ಮೀಕಿ ಜಾತ್ರೆ ಮಾದರಿಯಾಗಿದೆ ಎಂದು ಸಿದ್ಧರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷರೂ ಆದ ಮಠದ ಧರ್ಮದರ್ಶಿ ಸತೀಶ್ ಜಾರಕಿ ಹೊಳಿ ಮಾತನಾಡಿ, ಯಾವುದೇ ಅಧ್ಯಯನದ ಆದೇಶ ಇಲ್ಲದಿದ್ದರೂ ಬಹಳಷ್ಟು ಜನರನ್ನು ಎಸ್ಸಿ-ಎಸ್ಟಿಗೆ ಸೇರಿಸುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿಲ್ಲ, ಮೀಸಲಾತಿ ಸೇರಿಸುವ ಜನರಿಗೆ ಮೀಸಲಾತಿ ಪ್ರಮಾಣವನ್ನು ಕೊಟ್ಟು ಆರ್ಥಿಕ ಮೀಸಲಾತಿಯನ್ನು ಹೆಚ್ಚಿಸಿ ಎಂದು ಒತ್ತಾಯಿಸಿದರು.
ಮಾನ್ವಿ ಶಾಸಕ ರಾಜಾ ವೆಂಕಟಪ್ಪನಾಯಕ ಮಾತನಾಡಿದರು.
ಈ ವೇಳೆ ಕರ್ನಾಟಕ ಲೋಕಸಭಾ ಆಯೋಗದ ಸದಸ್ಯ ಪ್ರೊ. ರಂಗರಾಜ ವನದರ್ಗ ಅವರಿಗೆ `ವಾಲ್ಮೀಕಿ ರತ್ನ’ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸಾನಿಧ್ಯ ವಹಿಸಿದರು. ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರೂ ಆದ ಶಾಸಕ ಎಸ್.ವಿ.ರಾಮಚಂದ್ರ, ಶಾಸಕರಾದ ಎಸ್. ರಾಮಪ್ಪ, ಪಿ.ಟಿ. ಪರಮೇಶ್ವರನಾಯ್ಕ್ ಅನಿಲ್ ಚಿಕ್ಕಮಾದು, ಭೀಮನಾಯ್ಕ, ಟಿ. ರಘುಮೂರ್ತಿ, ಆರ್. ಶಂಕರ್, ಮಾಜಿ ಸಭಾಪತಿ ಬಿ. ಕೋಳಿವಾಡ, ಮಾಜಿ ಶಾಸಕರಾದ ಹೆಚ್.ಎಸ್.ಶಿವಶಂಕರ್, ಡಿ.ಜಿ ಶಾಂತನಗೌಡ, ಹೆಚ್.ಪಿ. ರಾಜೇಶ್, ರಾಮಕೃಷ್ಣ ದೊಡ್ಡಮನಿ, ಸಾ. ಲಿಂಗಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ, ಜಾತ್ರಾ ಸಮಿತಿ ಸಂಚಾಲಕ ಕೆ.ಪಿ. ಪಾಲಯ್ಯ, ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ಟಿ.ಜಿ ರಂಗಯ್ಯ, ಮುಖಂಡರಾದ ಬಿ.ವೀರಣ್ಣ, ಡಾ.ವೈ. ರಾಮಪ್ಪ ಎಂ. ನಾಗೇಂದ್ರಪ್ಪ, ಹೂವಿಗೇರಿ ರಮೆಶ್, ಟಿ. ಈಶ್ವರ್, ಸಿರಿಗೆರೆ ರಮೇಶ್, ಹಳೇಕೋಟಿ ವೀರೇಂದ್ರ ಸಿಂಹ, ಡಾ.ಹೆಚ್. ಮಹೇಶಪ್ಪ, ಸಣ್ಣ ತಿಮ್ಮಪ್ಪ ಬಾರ್ಕಿ, ಡಾ.ವಿ.ಬಿ ರಾಮಚಂದ್ರಪ್ಪ, ಜಿಗಳಿ ಆನಂದಪ್ಪ, ಕೆ.ಬಿ ಮಂಜುನಾಥ್, ಬಸವರಾಜನಾಯ್ಕ, ಶ್ರೀನಿವಾಸ ನಾಯಕ ಮತ್ತಿತರು ಈ ವೇಳೆ ಹಾಜರಿದ್ದರು.