ಜಗಳೂರು : ಹಂದಿಗಳ ಹಾವಳಿ ನಿಯಂತ್ರಣಕ್ಕೆ ಮಾಲೀಕರಿಗೆ ಸೂಚನೆ

ಜಗಳೂರು : ಹಂದಿಗಳ ಹಾವಳಿ ನಿಯಂತ್ರಣಕ್ಕೆ ಮಾಲೀಕರಿಗೆ ಸೂಚನೆ

ಜಗಳೂರು, ಫೆ. 9- ಪಟ್ಟಣದಲ್ಲಿ ಹಂದಿಗಳು, ಬಿಡಾಡಿ ದನಗಳ ಹಾಗೂ ನಾಯಿಗಳ ಹಾವಳಿ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಲೋಕ್ಯಾನಾಯ್ಕ್ ತಿಳಿಸಿದರು.

ಪಟ್ಟಣದ ಕೌನ್ಸಿಲ್ ಸಭಾಂಗಣದಲ್ಲಿ ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಸಿ. ವಿಶಾಲಾಕ್ಷಿ ಓಬಳೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಹಂದಿಗಳ ಉಪಟಳ ಹೆಚ್ಚಾಗಿದ್ದು, ಕೂಡಲೇ ಹಂದಿಗಳನ್ನು ಹೊರವಲಯದ ಸುರಕ್ಷಿತ ಸಾಕಾಣಿಕೆ ಕೇಂದ್ರಕ್ಕೆ ರವಾನಿಸಬೇಕು. ಇಲ್ಲವಾದರೆ ಬೇರೆಯವರನ್ನು ಕರೆಸಿ ಹಿಡಿಸಲಾಗುವುದು ಎಂದು ಹಂದಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.

ಪಟ್ಟಣದ ಹಳೆಯ ಮನೆಗಳ ನೆರೆಹೊರೆಯಲ್ಲಿ ಹಾಗೂ ಚರಂಡಿಗಳಲ್ಲಿ ಉರುಳಾಡಿ ಗಲೀಜು ಮಾಡಿ ದುರ್ವಾಸನೆ ಯುಕ್ತವನ್ನಾಗಿಸುತ್ತಿವೆ. ಅಲ್ಲದೆ ಸಾರ್ವಜನಿಕರು ಹಳೆಯ ಮನೆಗಳ ಪಕ್ಕದಲ್ಲಿ ಆಹಾರ ತ್ಯಾಜ್ಯ ವಸ್ತುಗಳನ್ನು ಎಸೆದರೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗಿರುವ ಮರಗಳ ಕೊಂಬೆಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಟೆಂಡರ್ ಕರೆಯಬೇಕು. ಅಲ್ಲದೆ ಪೊಲೀಸ್ ಇಲಾಖೆಗೆ ವಾಹನ ದಟ್ಟಣೆ ತಪ್ಪಿಸಲು ಬೈಕ್ ನಿಲುಗಡೆಗೆ ಸಂಚಾರಿ ನಿಯಮ ಪಾಲಿಸಲು ತಿಳಿಸಬೇಕು. 

ರೋಗಿಗಳನ್ನು ಹೊತ್ತ ಅಂಬ್ಯುಲೆನ್ಸ್ ಸಂಚಾರಕ್ಕೆ ಸುಗಮ‌ ದಾರಿ ಕಲ್ಪಿಸಬೇಕು. ಪ್ರತಿ ವಾರ್ಡ್‌ಗಳಲ್ಲಿ ಚರಂಡಿ ಸ್ವಚ್ಛತೆ, ರಸ್ತೆ ಮೂಲ ಸೌಕರ್ಯಕ್ಕೆ ಒತ್ತು ನೀಡಬೇಕು ಎಂದು ಪ.ಪಂ ಸದಸ್ಯರುಗಳು ಒಕ್ಕೊರಲಿನಿಂದ ಒತ್ತಾಯಿಸಿದರು.

ಪಟ್ಟಣದಲ್ಲಿ ಅನಧಿಕೃತವಾಗಿ ಫ್ಲೆಕ್ಸ್, ಬ್ಯಾನರ್‌ಗಳನ್ನು ಯಾವುದೇ ಪರವಾನಿಗಿ ಇಲ್ಲದೆ ಕಟ್ಟಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಶುಲ್ಕ ಪಾವತಿಸಿ ಪರವಾನಿಗೆ ಪಡೆಯಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಸದಸ್ಯರು ಸಲಹೆ ನೀಡಿದರು.

ಸಭೆಯಲ್ಲಿ ಸದಸ್ಯರಾದ ಆರ್. ತಿಪ್ಪೇಸ್ಬಾಮಿ, ರವಿಕುಮಾರ್, ಶಕೀಲ್ ಅಹಮ್ಮದ್, ಮುಖಂಡರಾದ ಓಬಳೇಶ್, ರಮೇಶ್ ಸೇರಿದಂತೆ ಸಾರ್ವಜನಿಕರು ಪೊಲೀಸ್ ಇಲಾಖೆಯವರು ಭಾಗವಹಿಸಿದ್ದರು.

error: Content is protected !!