ಚಿತ್ರಕಲೆಯಿಂದ ವಿಶಿಷ್ಟ ಅನುಭವ, ಆನಂದ ಲಭ್ಯ: ಡಾ.ಎಂ.ಜಿ. ಈಶ್ವರಪ್ಪ

ಚಿತ್ರಕಲೆಯಿಂದ ವಿಶಿಷ್ಟ ಅನುಭವ,  ಆನಂದ ಲಭ್ಯ: ಡಾ.ಎಂ.ಜಿ. ಈಶ್ವರಪ್ಪ

ದಾವಣಗೆರೆ, ಫೆ. 9-  ಕಲಾವಿದನ ಕೈಚಳಕದಿಂದ ಮೂಡಿ ಬಂದ ಸಂಪೂರ್ಣ ಚಿತ್ರ ವಿಶಿಷ್ಟ ಅನುಭವ, ಆನಂದ  ಉಂಟು ಮಾಡುತ್ತದೆ. ಚಿತ್ರಕಲೆಯನ್ನು ಆಸ್ವಾದಿಸುವ, ಮನಸುಗಳನ್ನು ಸೆಳೆಯುವ ಕೆಲಸವನ್ನು ದೃಶ್ಯಕಲಾ ಮಹಾವಿದ್ಯಾಲಯದವರು ಮಾಡಬೇಕಾಗಿದೆ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕ ಡಾ.ಎಂ.ಜಿ. ಈಶ್ವರಪ್ಪ ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾನಿಲಯದ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯ ವಿಶ್ವ ಕಲಾ ಗ್ಯಾಲರಿಯಲ್ಲಿ ಇಂದು ಆಯೋಜಿಸಿದ್ದ `ಕ್ರಿಯೆಟೀವ್ ಕಾಂಟೋರ್ಸ್’ ಸಮೂಹ ಚಿತ್ರಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದಾವಣಗೆರೆ ದೃಶ್ಯಕಲಾ ಮಹಾವಿದ್ಯಾಲಯಕ್ಕೆ ತನ್ನದೇ ಆದ ಖ್ಯಾತಿ, ವಿಶಿಷ್ಟತೆ ಇದೆ. ನನಗೂ ಕೂಡ ಈ ಕಾಲೇಜಿನ ಬಗ್ಗೆ ಅಪಾರವಾದ ಗೌರವವಿದೆ. ಕಾಲೇಜಿನಲ್ಲಿ ಪ್ರಾಚಾರ್ಯರಾಗಿ, ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದ್ದ ವಿ.ಬಿ. ಹಿರೇಗೌಡರ್, ಮಲ್ಲಿಕಾರ್ಜುನ್ ಜಾಧವ್, ಸೋಲಬಕ್ಕನವರ್, ಶಂಕರ ಪಾಟೀಲ್, ಬಿ.ಆರ್. ಕೊರ್ತಿ ಮತ್ತಿತರೆ ಹಿರಿಯ ಕಲಾವಿದರೂ ಸಹ ರಾಜ್ಯ, ರಾಷ್ಟ್ರಮಟ್ಟದಲ್ಲೂ ಹೆಸರು ಮಾಡಿರುವುದನ್ನು ಸ್ಮರಿಸಿದರು.

ಯಾವುದೇ ಶಾಲಾ-ಕಾಲೇಜುಗಳಿರಲಿ ಕಟ್ಟಡಗಳು ಕಡಿಮೆ ಇರಬೇಕು. ವಿಶಾಲವಾದ ಜಾಗ ಇರಬೇಕು. ಅಂತಹ ಕಾಲೇಜುಗಳು ಸುಂದರವಾಗಿ ಕಾಣುತ್ತವೆ. ಅಂತಹ ಕಾಲೇಜಿಗಳಿಗೂ ಸಹ ಬೆಲೆ ಬರುತ್ತದೆ ಎಂದು ಹೇಳಿದರು.

ದಾವಣಗೆರೆ ವಿವಿ ಕುಲಸಚಿವೆ (ಆಡಳಿತ) ಬಿ.ಬಿ. ಸರೋಜ ಚಿತ್ರಪ್ರದರ್ಶನ ಉದ್ಘಾಟಿಸಿ ಮಾತನಾಡಿ, ಚಿತ್ರಕಲೆ ಅದೊಂದು ವಿಶಿಷ್ಟ ಕಲೆ. ಅದು ಎಲ್ಲರಲ್ಲೂ ಬರೋಲ್ಲ. ಕೆಲವರು ಹುಟ್ಟಿನಿಂದಲೇ ಕಲೆಯ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಅವರಿಗೆ ಪ್ರೋತ್ಸಾಹ ಮುಖ್ಯ. ಚಿತ್ರಕಲೆ ಮನಸ್ಸಿಗೆ ಮುದ ನೀಡುತ್ತದೆ ಎಂದರು.

ಹಿಂದೆ ಕಲೆಯನ್ನು ಕಲಾವಿದರು ಹವ್ಯಾಸವನ್ನಾಗಿ ಮಾಡಿಕೊಂಡಿದ್ದರು. ಇದೀಗ ವೃತ್ತಿಯನ್ನಾಗಿ ಮಾಡಿಕೊಳ್ಳಲಾಗಿದೆ. ಸಹೃದಯರು ಸಹ ಚಿತ್ರಕಲೆಯ ವಿಶಿಷ್ಟತೆಯನ್ನು ಆಸ್ವಾದಿಸಬೇಕು. ಅನೇಕರು ಇಂತಹ ಚಿತ್ರಕಲೆಗಳಿಂದ ಬದುಕು ಕಟ್ಟಿಕೊಂಡಿದ್ದಾರೆ. ಇಂದಿನ ವಿದ್ಯಾರ್ಥಿಗಳು ಸಹ ಚಿತ್ರಕಲೆಯನ್ನು ಮೈಗೂಡಿಸಿಕೊಂಡು ಉತ್ತಮ ನಾಗರಿಕರಾಗಿ ಬಾಳಬೇಕು ಎಂದು ಹಿತ ನುಡಿದರು.

ದಾವಣಗೆೆರೆ ವಿವಿ ದೃಶ್ಯಕಲಾ ಮಹಾವಿದ್ಯಾಲಯಕ್ಕೆ ಉತ್ತಮ ಹೆಸರಿದೆ. ವಿದ್ಯಾರ್ಥಿಗಳ ಬೇಡಿಕೆಗಳಿಗೆ ಅನುಗುಣವಾಗಿ ಹೊಸ ಹೊಸ ಕೋರ್ಸ್‌ಗಳಿದ್ದು, ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಮಹಾವಿದ್ಯಾಲಯದ ಸಂಯೋಜನಾಧಿಕಾರಿ ಡಾ. ಸತೀಶ್ ಕುಮಾರ್ ಪಿ. ವಲ್ಲೇಪುರೆ ಮಾತನಾಡಿದರು. ಮತ್ತೊಬ್ಬ ಸಂಯೋಜಕ ಡಾ. ಜಯರಾಜ್ ಎಂ. ಚಿಕ್ಕಪಾಟೀಲ್, ಕ್ಯೂರೇಟರ್ ರಾಮಗಿರಿ ಪಿ. ಪೊಲೀಸ್ ಪಾಟೀಲ್, ದತ್ತಾತ್ರೇಯ ಭಟ್ ಉಪಸ್ಥಿತರಿದ್ದರು.

error: Content is protected !!