ದಾವಣಗೆರೆ, ಫೆ.6-ಭಾರತೀಯ ಜೀವ ವಿಮಾ ನಿಗಮವನ್ನು ಅದಾನಿ ಗ್ರೂಪ್‌ಗೆ ಮಾರಾಟ ಮಾಡಿ, ಷೇರು ಮಾರುಕಟ್ಟೆಯಲ್ಲಿ ಮನ ಬಂದಂತೆ ಏರಿಳಿತ ಮಾಡಿಸುವ ದಂಧೆಯಲ್ಲಿ ಬಿಜೆಪಿ ತೊಡಗಿಸಿಕೊಂಡಿದೆ ಎಂದು ಆರೋಪಿಸಿ, ಜಿಲ್ಲಾ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಶಾಂತಿ ಟಾಕೀಸ್ ರಸ್ತೆಯಲ್ಲಿರುವ ಎಲ್.ಐ.ಸಿ. ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು, ಬಡವರ ಹಣ ನುಂಗಿದ ಅದಾನಿಗೆ ಧಿಕ್ಕಾರ, ಮೋದಿಗೆ ಧಿಕ್ಕಾರ, ಬಿಜೆಪಿ ಪಕ್ಷಕ್ಕೆ ಧಿಕ್ಕಾರ ಎಂದು ಘೋಷಣೆ ಕೂಗಿದರು.
ಎಲ್‌ಐಸಿ ಹಾಗೂ ಎಸ್‌ಬಿಐನಲ್ಲಿ ಹೂಡಿಕೆ ಮಾಡಿರುವ ಸಾಮಾನ್ಯ ಜನರ ಹಣ ಅಪಾಯದಲ್ಲಿದೆ. ಕೇಂದ್ರ ಸರ್ಕಾರ ಬಡವರ ಹಣ ದೋಚಲು ಮುಂದಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅದಾನಿ ಹಗರಣವನ್ನು ಮುಚ್ಚಿ ಹಾಕಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಆಪ್ತ ಮಿತ್ರ ಗೌತಮ್ ಅದಾನಿ ಅವರನ್ನು ರಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅದಕ್ಕಾಗಿ ಸಂಸತ್‌ನಲ್ಲಿ ಚರ್ಚೆಗೆ ಅವಕಾಶ ನೀಡುತ್ತಿಲ್ಲ. ಲಕ್ಷ ಕೋಟಿಗಳ ಮೊತ್ತದ ಬಹು ದೊಡ್ಡ ಹಗರಣ ನಡೆದಿದೆ ಎಂದು ಆರೋಪಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ .ಬಿ ಮಂಜಪ್ಪ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ. ಜನರಿಗೆ ಮಂಕುಬೂದಿ ಎರಚಿದ್ದಾರೆ. ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿ ಯುವ ಜನತೆಯನ್ನು ವಂಚಿಸಿದೆ.
ಬಡವರ ಖಾತೆಗೆ 15 ಲಕ್ಷ ಹಾಕುವುದಾಗಿ ಹೇಳಿ ಜನತೆಗೆ ದ್ರೋಹ ಬಗೆದಿದ್ದಾರೆ.ದೇಶದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿಗರು ಎಲ್ಲಾ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿರುವುದು ಖಂಡನೀಯ ಎಂದರು.
ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಅಯೂಬ್ ಪೈಲ್ವಾನ್, ಕೆ.ಜಿ. ಶಿವಕುಮಾರ್, ಬಿ.ಕೆ. ಪರಶುರಾಮ್, ಜಿ.ಸಿ. ನಿಂಗಪ್ಪ, ಎಸ್ ಮಲ್ಲಿಕಾರ್ಜುನ, ಆರೀಫ್, ಮೈನುದ್ದೀನ್, ನಂಜಾನಾಯ್ಕ್, ಸುಭಾನ್, ಚಂದ್ರು ಡೋಲಿ, ಯುವರಾಜ್ ಹಾಗೂ ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.