ಬಸವಣ್ಣ, ಅಂಬೇಡ್ಕರ್ ಎಂದಿಗೂ ಜೀವಂತ

ಬಸವಣ್ಣ, ಅಂಬೇಡ್ಕರ್ ಎಂದಿಗೂ ಜೀವಂತ

ತಿಂಗಳ ಸಮಾಲೋಚನ ಸಭೆ, ಕಲಿಕಾ ಚೇತರಿಕೆ ಕಾರ್ಯಕ್ರಮದಲ್ಲಿ ಬಿಇಓ ಧಾರುಕೇಶ್ 

ದಾವಣಗೆರೆ, ಫೆ.1- ತಾಲ್ಲೂಕಿನ ಕನ್ನಡ, ಇಂಗ್ಲಿಷ್, ಹಿಂದಿ ಭಾಷಾ ಶಿಕ್ಷಕರಿಗೆ   ದಕ್ಷಿಣ ವಲಯದ ಸಂಪನ್ಮೂಲ ಕೇಂದ್ರದಲ್ಲಿ  ತಿಂಗಳ ಸಮಾಲೋಚನಾ ಸಭೆ ಹಾಗೂ ಕಲಿಕಾ ಚೇತರಿಕೆ ಉಪಕ್ರಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. 

ಕಾರ್ಯಕ್ರಮವನ್ನು  ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ  ಧಾರುಕೇಶ್,    ಶಾಶ್ವತವಾದ ಆತ್ಮಜ್ಞಾನ, ಸಂಸ್ಕಾರದ ಹಿಂದೆ ನಾವೆಲ್ಲರೂ ಸಾಗಿ, ಸಾವಿಲ್ಲದಂತೆ ಬದುಕಬೇಕಿದೆ. ದೇಹ ಅಷ್ಟಾವಕ್ರವಾದರೂ ಆತ್ಮಜ್ಞಾನಕ್ಕೆ ವಕ್ರತೆಯಿಲ್ಲ ಅದು ಸದಾ ದೈವಿಕಮಯ. ಈ ನಿಟ್ಟಿನಲ್ಲಿ ಮಕ್ಕಳಿಗೆ ನಾವು ಶಾಶ್ವತ ಜ್ಞಾನ ಸಾವಿಲ್ಲದಂತಹ  ಆತ್ಮ ಜ್ಞಾನವನ್ನು ಧಾರೆಯೆರೆಯಲು   ಸದಾ ಮುಂದಾಗಬೇಕು.

ನಮ್ಮಿಂದಾದ ಏನಾದರೂ ಕಾಯಕ ಮಾಡುತ್ತಲೇ ಇರಬೇಕು. ಬಸವಣ್ಣ, ಅಕ್ಕಮಹಾದೇವಿ, ಅಂಬೇಡ್ಕರ್ ಇಂದೂ ಬದುಕಿದ್ದಾರೆ, ಅದೂ ಶಾಶ್ವತವಾಗಿ.    ತಮ್ಮ ದೇಹ ಮೀರಿ ಆತ್ಮಜ್ಞಾನ ಸಂಪಾದನೆ ಮಾಡಿದ್ದರಿಂದ   ಅವರೆಂದೂ ಅಮರರು. 

ನಶ್ವರವಾದ ಭೌತಿಕ ಜಗತ್ತಿನ ಮಾಯೆಯ ಹಿಂದೆ ಸಾಗಿದರೆ ನಾವು ಇದ್ದೂ ಸತ್ತಂತೆ. ಶಾಶ್ವತವಾದ ಜ್ಞಾನದ ಹಿಂದೆ ಸಾಗಿ ಆತ್ಮಕ್ಕೆ ಸಂಸ್ಕಾರ ನೀಡಿದರೆ ನಮ್ಮ ಗುರುತನ್ನು ಈ ನೆಲದಲ್ಲಿ ಸದಾ ಕಾಲ ಉಳಿಸಲು ಸಾಧ್ಯ, ಅದೇ ಬಾಳುವುದರ ಜೀವಂತಿಕೆ. ಆ ನಿಟ್ಟಿನಲ್ಲಿ ನಾವು ಏನು ಬಂದರೂ ಕುಗ್ಗದೆ ನಗುನಗುತ್ತಾ ಬದುಕಿ ಜ್ಞಾನಿಗಳಾಗೋಣ ಎಂದು ಅಭಿಪ್ರಾಯಪಟ್ಟರು.   

ಬಿಆರ್‌ಸಿ  ಚೌಡಪ್ಪ  ಮಾತನಾಡಿ, ನಮ್ಮ ಪ್ರೌಢಶಾಲಾ ಶಿಕ್ಷಕರು ಅವಿರತವಾಗಿ ಮಕ್ಕಳ ಪ್ರಗತಿಗೆ ಶ್ರಮಿಸುತ್ತಿದ್ದಾರೆ,  ಆದರೆ ಎಸ್ ಎಸ್ ಎಲ್ ಸಿ ಫಲಿತಾಂಶ ಪರಿಮಾಣಾತ್ಮಕವಾಗಿ  ಗುಣಾತ್ಮಕವಾಗಿ ಬರಲು ಶಿಕ್ಷಕರು ಆಸಕ್ತಿ ಕಳೆದುಕೊಳ್ಳದೆ ಪ್ರೀತಿಯಿಂದ ಶ್ರಮಿಸಬೇಕು ಎಂದರು.

ಕನ್ನಡ ಭಾಷಾ ವಿಷಯದ ಸಮಾಲೋಚನಾ ಸಭೆಯನ್ನು ಕನ್ನಡ ಭಾಷಾ ಶಿಕ್ಷಕರಾದ ಕೆ. ಎಂ. ಪಂಚಾಕ್ಷರಯ್ಯ, ಬಿರಾದಾರ್, ಮುರಿಗೇಂದ್ರಯ್ಯನವರು  ಯೋಜಿತವಾಗಿ ನಡೆಸಿದರು.  ಬಿಆರ್‌ಪಿ ವೀರಭದ್ರಪ್ಪ, ಭುವನೇಶ್ವರಿ, ಇಸಿಓ ಚೇತನ  ಹಾಗೂ ತಾಲ್ಲೂಕಿನ ಸರ್ಕಾರಿ ಪ್ರೌಢಶಾಲೆಗಳ ಮೂರು ಭಾಷಾ ವಿಷಯಗಳ ಎಲ್ಲಾ ಹಿರಿಯ, ಕಿರಿಯ ಶಿಕ್ಷಕರು ಹಾಜರಿದ್ದರು.

ಇದೇ ಸಂದರ್ಭದಲ್ಲಿ  ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಮೇಲಿನ ತುಂಬು ಅಭಿಮಾನದಿಂದ ಇಂದಿನ ಕಾರ್ಯಕ್ರಮದ ಮಧ್ಯಾಹ್ನದ ದಾಸೋಹದ ಪ್ರಾಯೋಜಕತ್ವವನ್ನು ಹೃತ್ಪೂರ್ವಕವಾಗಿ ನೀಡಿ, ನಿರ್ವಹಿಸಿದ ಹೂವಿನಮಡು ಸರ್ಕಾರಿ ಪ್ರೌಢಶಾಲೆಯ ಕನ್ನಡ ಭಾಷಾ ಶಿಕ್ಷಕಿ  ಎ.ಸಿ.ಶಶಿಕಲಾ ಶಂಕರಮೂರ್ತಿ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.

error: Content is protected !!