ಜೈನ್ ಪಬ್ಲಿಕ್ ಶಾಲಾ ವಾರ್ಷಿಕೋತ್ಸವದಲ್ಲಿ ಇಸ್ರೋ ವಿಜ್ಞಾನಿ ಕಿರಣ್ ಕುಮಾರ್ ಆಶಯ
ದಾವಣಗೆರೆ, ಫೆ. 1- ನಮ್ಮ ದೇಶದಲ್ಲಿ ಮತ್ತಷ್ಟು ವಿಜ್ಞಾನ ಬೆಳವಣಿಗೆ ಜೊತೆಗೆ ಪ್ರಪಂಚದಲ್ಲಿ ಎದುರಾಗಿರುವ ಸಮಸ್ಯೆಗಳ ನಿವಾರಣೆ ಕಾಣಲು ಮುಂದಿನ ಯುವ ಪೀಳಿಗೆ ತಮ್ಮನ್ನು ತಾವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದು ಇಸ್ರೋ ವಿಜ್ಞಾನಿ, ಮಾಜಿ ಅಧ್ಯಕ್ಷ ಎ.ಎಸ್. ಕಿರಣ್ ಕುಮಾರ್ ಆಶಿಸಿದರು.
ಅವರು, ಬಾಡ ಕ್ರಾಸ್ ನಲ್ಲಿರುವ ಜೈನ್ ಪಬ್ಲಿಕ್ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಪ್ರಪಂಚದಲ್ಲಿ ಅಷ್ಟೇ ಅಲ್ಲದೆ ಭೂಮಿ ಮೇಲೆ ಮನುಷ್ಯ ಜೀವನ ನಡೆಸಬೇಕಾದರೆ ಆಹಾರ, ಶಕ್ತಿ ಸಿಗುವ ಹಂತದಲ್ಲಿ ಸಾಕಷ್ಟು ಸಮಸ್ಯೆಗಳು ಹೊಸದಾಗಿ ಎದುರಾಗುತ್ತಿವೆ. ಜನಸಂಖ್ಯೆ ಹೆಚ್ಚಾದಂತೆ ಈ ಸಮಸ್ಯೆಗಳ ಉಲ್ಬಣ ಸಹಜ. ಇವುಗಳ ನಿವಾರಣೆಗೆ ಪರಿಹಾರ ಕಂಡುಕೊಳ್ಳಲು ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ತುಂಬಾ ಅವಶ್ಯಕ ಎಂದು ತಿಳಿಸಿದರು.
ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಲ್ಲಿ ನಮ್ಮ ದೇಶ ಹಿಂದೆ ಉಳಿದಿಲ್ಲ. ಕೋವಿಡ್ ಅನ್ನು ಎದುರಿಸುವುದರ ಜೊತೆಗೆ ಲಸಿಕೆ ತಯಾರಿಸಿ, ಜನರ ಜೀವಗಳನ್ನು ಉಳಿಸಲು ಸಾಧ್ಯವಾಗಿದ್ದೇ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ. ತಂತ್ರಜ್ಞಾನದ ಬೆಳವಣಿಗೆಯಲ್ಲಿ ಅದರಲ್ಲೂ ಬಾಹ್ಯಾಕಾಶದ ತಂತ್ರಜ್ಞಾನದಲ್ಲಿ ಕೆಲವೇ 5,6 ದೇಶಗಳಲ್ಲಿ ಬೆಳವಣಿಗೆಯ ಸಾಮರ್ಥ್ಯವಿದೆ. ಅವುಗಳಲ್ಲಿ ಭಾರತ ದೇಶವೂ ಒಂದಾಗಿದೆ. ನಮ್ಮ ದೇಶದಲ್ಲೇ ಓದಿದ ವಿಜ್ಞಾನಿಗಳು, ತಂತ್ರಜ್ಞಾನಿಗಳು ತಯಾರಾಗಿದ್ದು, ತಂತ್ರಜ್ಞಾನದ ಸಾಧನೆಯಲ್ಲಿ ಭಾರತ ಕೆಲವೇ ರಾಷ್ಟ್ರಗಳ ಪಂಕ್ತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಮೌಲ್ಯಮಾಪನ ಕುಲಸಚಿವ ಡಾ. ಕೆ. ಶಿವಶಂಕರ್, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಉಪ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ. ಪ್ರಕಾಶ್, ಜೈನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ನ ಅಧ್ಯಕ್ಷ ಅಚಲಾನಂದ ಜೈನ್, ಜೈನ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಎಸ್. ನಟರಾಜ್ ಸೇರಿದಂತೆ ಇತರರು ಇದ್ದರು.