ಸಾಮೂಹಿಕ ವಿವಾಹದಿಂದ ಬಡವರ ಕಲ್ಯಾಣ

ಸಾಮೂಹಿಕ ವಿವಾಹದಿಂದ ಬಡವರ ಕಲ್ಯಾಣ

ಚಿತ್ರದುರ್ಗ, ಫೆ.5- ಸಾಮೂಹಿಕ ಕಲ್ಯಾಣ ಮಹೋತ್ಸವದಿಂದ ಬಡವರ ಕಲ್ಯಾಣವಾಗಿದೆ. ಬಡವರ ಬಂಧು ಶ್ರೀ ಮುರುಘಾ ಮಠ. ಇದೊಂದು ಭಾವೈಕ್ಯ ಕೇಂದ್ರ. ಇಂದು ವರದಕ್ಷಿಣೆ ಎನ್ನುವುದು ಸಾಮಾಜಿಕ ಪಿಡುಗಾಗಿ ಕಾಡುತ್ತಿದೆ. ವರದಕ್ಷಿಣೆ ತೆಗೆದುಕೊಳ್ಳುವವರು ಆದರ್ಶ ವ್ಯಕ್ತಿ ಆಗಲು ಸಾಧ್ಯವಿಲ್ಲ ಎಂದು ಶ್ರೀ ಬಸವಪ್ರಭು ಸ್ವಾಮೀಜಿ ಹೇಳಿದರು.

ಶ್ರೀಮಠದಲ್ಲಿ ನಡೆದ ಮುವತ್ಮೂರನೇ ವರ್ಷದ ಎರಡನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಅದ್ಧೂರಿ ಮದುವೆಗಳಿಗೆ ಕಡಿವಾಣ ಹಾಕಬೇಕು. ಸಮ ಸಮಾಜ ನಿರ್ಮಾಣವಾಗಬೇಕು. ಸಂಸಾರದಲ್ಲಿ ದಂಪತಿ ಮಧ್ಯೆ ಪ್ರತಿಷ್ಠೆ ಇಣುಕಿ ಹಾಕದಂತೆ ಜಾಗ್ರತೆ ವಹಿಸಿ, ಸದಾ ಪ್ರೀತಿಯಿಂದ ನೆಮ್ಮದಿಯಿಂದ ಜೀವನ ಸಾಗಿಸಬೇಕು. ನಂಬಿಕೆ ಎಂಬ ಔಷಧ ನಮ್ಮೆಲ್ಲರಲ್ಲಿರಬೇಕೆಂದು ನುಡಿದರು. 

ಜಗಳೂರಿನ ಗವಿಸಿದ್ದೇಶ್ವರ ಮಠದ ಶ್ರೀ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ಯಾವುದೇ ಜಾತಿ, ಭೇದ ಇಲ್ಲದೆ ಶ್ರೀ ಮುರುಘಾ ಮಠ ಸಾಮೂಹಿಕ ಕಲ್ಯಾಣ ಮಹೋತ್ಸವ ಮಾಡುತ್ತಾ ಬಂದಿದೆ. ಶರಣರನ್ನು ಒಗ್ಗೂಡಿಸುವ ಶಕ್ತಿ ಶ್ರೀಮಠಕ್ಕೆ ಇದೆ. ವಿವಾಹವಾದ ನಂತರ ಸತಿ-ಪತಿಗಳು ದಾಂಪತ್ಯ ಬದುಕಿನಲ್ಲಿ ಶಾಂತಿ ಸ್ಥಾಪನೆ ಮಾಡಿಕೊಳ್ಳಬೇಕು. ಹೊಂದಾಣಿಕೆ ಮನೋಭಾವ ಮುಖ್ಯ. ಸಂಸಾರದಲ್ಲಿ ಅನ್ಯೋನ್ಯತೆ ಮುಖ್ಯ. ಪರಸ್ಪರ ಅರಿತು ಜೀವನ ಸಾಗಿಸಬೇಕು. ಸಂಸಾರದಲ್ಲಿ ವಿಷಮತೆ ಬರಬಾರದು. ಇದ್ದಷ್ಟು ಕಾಲ ಕರುಣೆಯಿಂದ ಕೆಲಸ ನಿರ್ವಹಿಸಬೇಕು. ಯಾರನ್ನೂ ನಿಂದಿಸಬಾರದು. ಸಮಸ್ಯೆಗಳಿಂದ ಹೊರಬರಬೇಕಾದರೆ ಶ್ರೀಗುರುವಿನ ಮೊರೆ ಹೋಗಬೇಕೆಂದರು.

ಸಮ್ಮುಖ ವಹಿಸಿದ್ದ ಶಿವಶರಣ ಹರಳಯ್ಯ ಗುರುಪೀಠದ ಶ್ರೀ ಬಸವ ಹರಳಯ್ಯ ಸ್ವಾಮೀಜಿ ಮಾತನಾಡಿ, ದೀನ ದಲಿತರು, ಮೇಲ್ವರ್ಗ ಮತ್ತು ಕೆಳವರ್ಗದವರ ಜತೆಗೆ ಕುಳಿತು ವಿವಾಹವಾಗುವ ಮೂಲಕ ಅಸ್ಪೃಶ್ಯತೆ ನಿವಾರಣೆಯಾಗಬೇಕೆಂಬುದು ಸಾಮೂಹಿಕ ಕಲ್ಯಾಣ ಮಹೋತ್ಸವದ ಉದ್ಧೇಶ ಹಾಗೂ ಅದ್ಧೂರಿ ವಿವಾಹಗಳಿಗೆ ನಾಂದಿ ಹಾಡಬೇಕೆಂದು ಸರಳವಾಗಿ ವಿವಾಹಗಳನ್ನು ಶ್ರೀಗಳು ನಡೆಸುತ್ತಿದ್ದಾರೆ. 33 ವರ್ಷಗಳಿಂದ ವಿವಾಹ ನಿರಂತರವಾಗಿ ಮಾಡುವುದೆಂದರೆ ಸುಲಭದ ಮಾತಲ್ಲ. ಸತ್ಯ ಹೇಳಿದ್ದರಿಂದ ಅನೇಕ ದಾರ್ಶನಿಕರು ನೋವನ್ನು ಅನುಭವಿಸಿದರು. ಸೂರ್ಯನನ್ನು ಮೋಡ ಮುಚ್ಚಿಡಲು ಸಾಧ್ಯವಿಲ್ಲ. ಸತ್ಯ ಯಾವಾಗಲೂ ಉರಿಯುವ ಸೂರ್ಯನಿದ್ದಂತೆ. ಇಡೀ ರಾಜ್ಯ ದೇಶಕ್ಕೆ ನೀತಿ ಬೋಧನೆಯನ್ನು ಹೇಳಿಕೊಟ್ಟ ಮಠ. ಇದೊಂದು ಶಕ್ತಿ ಪೀಠ. ಮನಸ್ಸುಗಳು ಒಂದಾದಾಗ ಅದು ಕಲ್ಯಾಣ ಮಹೋತ್ಸವವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕುರುಬ (ವರ) – ಕ್ರಿಶ್ಚಿಯನ್ (ವಧು) ಅಂತರ್ಜಾತಿ ಸೇರಿದಂತೆ ನಾಯಕ – 2 ಮತ್ತು ವಿಶ್ವಕರ್ಮ – 2 ಜತೆ ಸೇರಿದಂತೆ, ಒಟ್ಟು 5  ಜೋಡಿ ವಿವಾಹ ನೆರವೇರಿತು.  ಪೈಲ್ವಾನ್ ತಿಪ್ಪೇಸ್ವಾಮಿ, ಜ್ಞಾನಮೂರ್ತಿ ಮತ್ತಿತರರಿದ್ದರು.

ಜಮುರಾ ಕಲಾವಿದರು ಪ್ರಾರ್ಥಿಸಿದರು. ಬಸವಲಿಂಗ ದೇವರು ಸ್ವಾಗತಿಸಿದರು. ಪ್ರಕಾಶ ದೇವರು ನಿರೂಪಿಸಿದರು.

error: Content is protected !!