ಮಾರ್ಚ್ ಅಂತ್ಯದೊಳಗೆ ಕಾಮಗಾರಿಗಳ ಪೂರ್ಣಕ್ಕೆ ಸೂಚನೆ

ಮಾರ್ಚ್ ಅಂತ್ಯದೊಳಗೆ ಕಾಮಗಾರಿಗಳ ಪೂರ್ಣಕ್ಕೆ ಸೂಚನೆ

ಹರಿಹರ, ಫೆ. 3 – ಸರ್ಕಾರ ತಾಲ್ಲೂಕಿನ ಹಲವಾರು ಕಾಮಗಾರಿಗಳಿಗೆ ಬಿಡುಗಡೆ ಮಾಡಿರುವ ಹಣವನ್ನು ಬರುವ ಮಾರ್ಚ್ ಅಂತ್ಯದಲ್ಲಿ ಹಣವನ್ನು ಬಳಕೆ ಮಾಡಿ ಕಾಮಗಾರಿ ಸಂಪೂರ್ಣವಾಗಿ ಮುಗಿಸಬೇಕು. ಇಲ್ಲದೆ ಹೋದರೆ ಸರ್ಕಾರ ಮುಂದೆ ಹಣವನ್ನು ಬಿಡುಗಡೆ ಮಾಡುವ ಸಮಯದಲ್ಲಿ ತೊಂದರೆಗಳಾಗುತ್ತವೆ. ತಾಲ್ಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಸರ್ಕಾರ ಬಿಡುಗಡೆ ಮಾಡಿರುವ ಹಣವನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡುವ ಮೂಲಕ ಬಹಳ ಜವಾಬ್ದಾರಿಯಿಂದ ಕರ್ತವ್ಯವನ್ನು ನಿರ್ವಹಣೆ ಮಾಡುವಂತೆ ಜಿಲ್ಲಾ ಪಂಚಾಯತಿ ಲೆಕ್ಕಾಧಿಕಾರಿ ಸೌಮ್ಯಶ್ರೀ ಸಲಹೆ ನೀಡಿದರು.

ನಗರದ ತಾಪಂ ಕಚೇರಿಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

ತಾಲ್ಲೂಕಿನ ಹಲವಾರು ಗ್ರಾಮದಲ್ಲಿ ನಡೆಯುತ್ತಿರುವ ಜಲಸಿರಿ ಯೋಜನೆಯ ಕಾಮಗಾರಿ ಗುಣಮಟ್ಟವಿಲ್ಲ. ನೀರು ಸರಬರಾಜು ಪೈಪ್ ಮೂರು ಅಡಿ ಆಳವಾಗಿರಬೇಕು. ಆದರೆ ಒಂದು ಚಿಕ್ಕ ವಾಹನಗಳು ಓಡಾಡಿದರೆ ಪೈಪ್ ಮೇಲೆ ಕಾಣಿಸುತ್ತದೆ. ಜಲಸಿರಿ ಕಾಮಗಾರಿ ಬಗ್ಗೆ ಮುತುವರ್ಜಿವಹಿಸಬೇಕೆಂದು ಸೂಚನೆ ನೀಡಿದರು.

ಅಕ್ಷರ ದಾಸೋಹ ಇಲಾಖೆ ಮಕ್ಕಳ ಬಗ್ಗೆ ಮಾಹಿತಿ ಪಡೆದುಕೊಂಡು ಅವರಿಗೆ ಸೌಲಭ್ಯಗಳನ್ನು ಒದಗಿಸಿ, ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ಜೊತೆಗೆ ಶುಚಿತ್ವ ಕಾಪಾಡಬೇಕು  ಎಂದರು.

ಪಂಚಾಯತ್ ರಾಜ್ ಇಲಾಖೆಯಿಂದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಕಾಮಗಾರಿ ಕಳಪೆಯಾಗುತ್ತಿದ್ದರೂ  ಸಹ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ಈ ಬಗ್ಗೆ ಕಾಯಕನಿಷ್ಠೆಯಿಂದ ಕರ್ತವ್ಯವನ್ನು ಪೂರೈಸಲು ಮುಂದಾಗಬೇಕು.ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ಕಾರ  ವ್ಯಾಪಕವಾಗಿ ಔಷಧಿ ಮತ್ತು ಚುಚ್ಚುಮದ್ದು ಸರಬರಾಜು ಮಾಡಿದರೂ ಸಹ ವೈದ್ಯರು ಹೊರಗಡೆ ಚೀಟಿ ಬರೆದು ಕೊಡುವುದು ಮತ್ತು ಔಷಧಿ ಕೇಂದ್ರದಲ್ಲಿ ವೈದ್ಯರು ಹತ್ತು ಮಾತ್ರೆ ಬರೆದರೆ ನಾಲ್ಕು ಮಾತ್ರೆ ಕೊಡುವಂತ ಪದ್ದತಿಯನ್ನು ಹೋಗಲಾಡಿಸಲು ವೈದ್ಯಾಧಿಕಾರಿ ಕಾಳಜಿ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಪರೀಕ್ಷೆ ಹತ್ತಿರ ಬರುತ್ತಿರುವ ಕಾರಣ ಮಕ್ಕಳಿಗೆ ಪೌಷ್ಟಿಕಾಹಾರ ಕೊಡಬೇಕು. ಅವರನ್ನು ಚೆನ್ನಾಗಿ ಪೋಷಣೆ ಮಾಡಬೇಕು, 26 ಅಡುಗೆ ಸಿಬ್ಬಂದಿಗಳಿಗೆ 8 ತಿಂಗಳ ಕಾಲ ವೇತನವನ್ನು ಕೊಟ್ಟಿಲ್ಲ ಎಂದರೆ ಹೇಗೆ ಅವರದು ಜೀವನ ಹೇಗೆ ನಡೆಯಬೇಕು. ಹಾಗಾಗಿ ಅಡುಗೆ ಮಾಡುವ ಸಿಬ್ಬಂದಿಗಳಿಗೆ ಸರಿಯಾದ ಸಮಯದಲ್ಲಿ ವೇತನವನ್ನು ಕೊಡಬೇಕು, ಹಾಷ್ಟಲ್ ನಿರ್ವಹಣೆ ಸರಿಯಾದ ರೀತಿಯಲ್ಲಿ ಇರುವಂತೆ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.    

ತಾಲ್ಲೂಕಿನಲ್ಲಿ ಬಹಳಷ್ಟು ನಕಲಿ ವೈದ್ಯರ ಹಾವಳಿ ಹೆಚ್ಚಾಗಿದ್ದರೂ ಸಹ ತಾಲ್ಲೂಕು ಆರೋಗ್ಯಾಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದರು.

ಆದರೆ ಆರೋಗ್ಯ ಇಲಾಖೆ ಇಷ್ಟೊಂದು ನಿರ್ಲಕ್ಷ್ಯ ತೋರಿದ ಸಮಯದಲ್ಲಿ ರೋಗಿಗಳಿಗೆ ಏನಾದರೂ ತೊಂದರೆಗಳು ಆದರೆ ಅರದ ಹೊಣೆ ನೀವೆ ಹೋಗ ಬೇಕಾಗುತ್ತದೆ. ಸರ್ಕಾರ ಸಾರ್ವಜನಿಕರ ಆರೋಗ್ಯ ಸುಧಾರಣೆ ತರಲು ಸಾಕಷ್ಟು ವ್ಯವಸ್ಥೆ ಮಾಡುತ್ತಿದ್ದರು ಅದರ ನಿರ್ವಹಣೆ ಮಾಡುವಲ್ಲಿ ವಿಫಲವಾದ ಕಾರಣ ರೋಗದ ಹರಡುವಿಕೆಯ ಪ್ರಮಾಣ ಹೆಚ್ಚಾಗಿ ಸಾವು ನೋವುಗಳು ಸಂಭವಿಸಿದ್ದು, ಮುಂದೆ ಆಗೆ ಆಗದಂತೆ ನೋಡಿಕೊಂಡು ಹೋಗುವಂತೆ ತಿಳಿಸಿದರು. 

ಇ.ಓ ಗಂಗಾದರನ್ ಮಾತನಾಡಿ ನಂದಿಗಾವಿ ಕೊಂಡಜ್ಜಿ, ಸೇರಿದಂತೆ ತಾಲ್ಲೂಕಿನ ನಾಲ್ಕು ಶಾಲೆಗಳಲ್ಲಿ ಅನ್ನ ಸಿದ್ದತೆಗೆ ಬಳಸುತ್ತಿರುವ ನೀರು ಮತ್ತು ಶೌಚಾಲಯ ನೀರು ಒಂದೇ ಪೈಪ್ ನಲ್ಲಿ ಹೋಗುತ್ತಿರುವ ಕಾರಣ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಕೂಡಲೇ ಪೈಪ್ ಲೈನ್ ವ್ಯವಸ್ಥೆ ಬದಲಾವಣೆ ಮಾಡಿ ತಾಲ್ಲೂಕಿನ ಹಲವಾರು ಗ್ರಾಮದಲ್ಲಿ ಸಸಿಗಳನ್ನು ನೆಡಲು ಬಹಳ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ದೂರನ್ನು ಸಲ್ಲಿಸಿದ್ದು ಆಗಾಗಿ ಗ್ರಾಮೀಣ ಪ್ರದೇಶದ ರಸ್ತೆಯ ಅಕ್ಕ ಪಕ್ಕದಲ್ಲಿ ಉತ್ತಮ ಗುಣಮಟ್ಟದ ಸಸಿಗಳನ್ನು ನೆಡುವಂತೆ ಹೇಳಿದರು.

ಬಿಇಓ ಹನುಮಂತಪ್ಪ ಮಾತನಾಡಿ ಈಗಾಗಲೇ ಎಸ್.ಎಸ್.ಎಲ್.ಸಿ ಪರೀಕ್ಷೆ ಹತ್ತಿರವಿರುವ ಕಾರಣ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಒಂದು ಗಂಟೆ ಹೆಚ್ಚು ಪಾಠವನ್ನು ಮಾಡುವ ವ್ಯವಸ್ಥೆ ಮಾಡಲಾಗಿದೆ ಜೊತೆಗೆ ಗುಂಪು ಅಧ್ಯಯನ ಎಂದು ಹೊಸದಾಗಿ ಜಾರಿಗೆ ತಂದಿರುವ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗಿದೆ ಮತ್ತು ಸುಮಾರು 800 ವಿದ್ಯಾರ್ಥಿಗಳಿಗೆ ಬೆಂಗಳೂರಿನ ನುರಿತ ಶಿಕ್ಷಕರಿಂದ ತರಬೇತಿಯನ್ನು ಕೊಡಲಾಗುತ್ತಿದೆ ಎಂದು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಬಸವರಾಜ್ ಮಾತನಾಡಿ, ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಇಲಾಖೆಯ ವತಿ ಯಿಂದ 62 ಕಾಮಗಾರಿಯಲ್ಲಿ 57 ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಇನ್ನೂ ಹತ್ತು ಕಾಮಗಾರಿ ಪ್ರಗತಿ ಹಂತದಲ್ಲಿ ಇವೆ. ‌ ಮಾರ್ಚ್ ಅಂತ್ಯಕ್ಕೆ ಎಲ್ಲಾ ಕಾಮ ಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದರು. 

ಅರಣ್ಯ ಇಲಾಖೆಯ ಅಧಿಕಾರಿ ಮಾತನಾಡಿ, ಈ ವರ್ಷದ ಅಂತ್ಯಕ್ಕೆ ನರೆಗಾ ಯೋಜನೆ ಅಡಿಯಲ್ಲಿ 20 ಸಾವಿರ ಸಸಿಗಳನ್ನು ಸಿದ್ದತೆ ಮಾಡಲು ಆದೇಶ ಇದ್ದು, ಇಲ್ಲಿಯವರೆಗೆ 12 ಸಾವಿರ ಮಾಡಲಾಗಿದೆ. ಜೊತೆಗೆ ‌1 ಲಕ್ಷದ 32 ಸಾವಿರ ಸಸಿಗಳನ್ನು ನೆಡಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ನಾರನಗೌಡ, ತಾಲ್ಲೂಕು ಆರೋಗ್ಯ ಇಲಾಖೆಯ ಅಧಿಕಾರಿ ಡಾ ಚಂದ್ರಮೋಹನ್, ತೋಟಗಾರಿಕೆ ಇಲಾಖೆ ಅಧಿಕಾರಿ ರೇಖಾ, ಗ್ರಾಮೀಣ ಕುಡಿಯುವ ನೀರಿನ ಸರಬರಾಜು ಇಲಾಖೆ ಅಧಿಕಾರಿ ಬಸವರಾಜ್, ತಾಪಂ ಲೆಕ್ಕಾಧಿಕಾರಿ ಲಿಂಗಾರಾಜ್, ಪೂಜಾ,  ಹಿಂದುಳಿದ ಇಲಾಖೆಯ ಅಧಿಕಾರಿ ಪರವಿನ್ ಭಾನು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಾಸಿರ್ ಉದ್ದಿನ್, ಇತರರು ಹಾಜರಿದ್ದರು.

error: Content is protected !!