ದಾವಣಗೆರೆ, ಫೆ. 2- ನಗರದ ಬಾಪೂಜಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ‘ಅವಿಷ್ಕಾರ್ ಮತ್ತು ತಂತ್ರ ವಿಜ್ಞಾನ ಹಾಗೂ ರೋಬೋಟಿಕ್ ವಸ್ತು ಪ್ರದರ್ಶನ’ ಏರ್ಪಡಿಸಲಾಗಿತ್ತು.
ಪಿ.ಎಸ್.ಎಸ್.ಇ.ಎಂ.ಆರ್. ಮತ್ತು ಡಾ.ಎಸ್.ಎಸ್.ಎನ್.ಪಿ. ಶಾಲೆ ಜಂಟಿ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಧಾರುಕೇಶ್ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿನಿಂದ, ಭಕ್ತಿಯಿಂದ ಶಿಕ್ಷಣವನ್ನು ಪಡೆಯುವ ಮೂಲಕ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ವಿಯಾಗಬೇಕೆಂದು ಕರೆ ನೀಡಿ, ವಸ್ತು ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ ಶಿಕ್ಷಣ ಸಂಯೋಜಕರಾದ ಆರ್. ಚೇತನಾ, ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ್ ಗೌಡ, ಎ.ಸಿ.ಸವಿತಾ, ಎನ್. ಆರ್. ನಳಿನಿ ಅವರುಗಳು ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.
ಶಾಲೆಯ ಮುಖ್ಯಸ್ಥ ಮಂಜುನಾಥ್ ರಂಗರಾಜು, ಪ್ರಾಂಶುಪಾಲರುಗಳಾದ ಜೆ. ಎಸ್. ವನಿತಾ, ಡಾ. ಪಿ. ಪ್ರೀತಿ ಸಿಂಗ್ ಮತ್ತು ಬಿ.ಎನ್.ಕಮಲ್, ಉಪ ಪ್ರಾಂಶುಪಾಲ ರಮೇಶ್ ಬಾಬು, ಶಾಲೆಯ ಸಹ ಸಂಯೋಜಕರಾದ ಎಸ್.ಮಂಜುಳ, ಸಿ. ರುತಿಕಾ, ಶೈಕ್ಷಣಿಕ ಮಾರ್ಗದರ್ಶಕರಾದ ಸಿ. ಮಂಜಪ್ಪ ಉಸ್ತುವಾರಿಗಳಾದ ಪಿ. ವಿ ಪ್ರಭು, ಸವಿತಾ ರಮೇಶ್, ಸುಮ ಕುಲಕರ್ಣಿ, ಸುಮಂಗಲ ಮತ್ತಿತರರು ಉಪಸ್ಥಿತರಿದ್ದರು.
100 ಕ್ಕೂ ಹೆಚ್ಚು ವಿವಿಧ ಮಾದರಿಗಳು ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಇದ್ದವು, ಅದರಲ್ಲಿ ಪ್ರಮುಖವಾಗಿ ನೀರಿನ ಯಂತ್ರ, ಕೈಯಿಂದ ನೀರೆತ್ತುವ ಯಂತ್ರ, ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸುವ ಯಂತ್ರ, ಔಷಧೀಯ ಸಸ್ಯಗಳು, ಗಾಳಿಯ ಒತ್ತಡ, ಗಾಳಿಯ ವಿಸ್ತರಣೆ, ಭೂಮಿಯ ಗುರುತ್ವಾಕರ್ಷಣೆ, ಸುಂದರ ಹವಮಾನ ವರದಿ, ಜಲವಿದ್ಯುತ್ ಅಣೆಕಟ್ಟು ಮುಂತಾದ ಮಾದರಿಗಳು ಪ್ರದರ್ಶನದಲ್ಲಿ ಗಮನ ಸೆಳೆದವು.
ಆರಂಭಕ್ಕೆ ಧ್ಯಾನ್ ಪ್ರಾರ್ಥಿಸಿದರು. ಭಾರ್ಗವಿ ಮತ್ತು ತಂಡದವರು ‘ಆನಂದ ನರ್ತನ’ ಭರತ ನಾಟ್ಯ, ಸಮೀರ್ ಬಿಸ್ವಾಸ್ ಅವರು ತರಬೇತಿ ನೀಡಿದ ಆರ್ಯ ಸಿದ್ದೇಶ್ ಮತ್ತು ತಂಡದವರು ಪ್ರದರ್ಶಿಸಿದ ‘ಮೇರೆ ನಿಶಾನ್’ ಹಾಡಿನ ನೃತ್ಯ ಗಮನ ಸೆಳೆಯಿತು.