ಕುಲಕಸುಬಿನ ಜೊತೆಗೆ ಶಿಕ್ಷಿತರಾದರೆ ಅಭಿವೃದ್ಧಿ ಸಾಧ್ಯ

ಕುಲಕಸುಬಿನ ಜೊತೆಗೆ ಶಿಕ್ಷಿತರಾದರೆ ಅಭಿವೃದ್ಧಿ ಸಾಧ್ಯ

ಹರಪನಹಳ್ಳಿ ತಾ.ಪಂ. ಸಾಮರ್ಥ್ಯ ಸೌಧದಲ್ಲಿ ನಡೆದ ಮಡಿವಾಳ  ಮಾಚಿದೇವರ ಜಯಂತ್ಯೋತ್ಸವದಲ್ಲಿ ಜಿ. ಕರುಣಾಕರ ರೆಡ್ಡಿ

ಹರಪನಹಳ್ಳಿ, ಫೆ. 2- ಮಡಿವಾಳ ಸಮಾಜ ತಮ್ಮ ಕುಲಕಸುಬಿನ ಜೊತೆಗೆ ಶಿಕ್ಷಣವಂತರಾದರೆ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.

ಪಟ್ಟಣದ ತಾ.ಪಂ. ಸಾಮರ್ಥ್ಯಸೌಧದಲ್ಲಿ ತಾಲ್ಲೂಕು ಆಡಳಿತದಿಂದ ಆಯೋಜಿಸಿದ್ದ ಮಡಿವಾಳ  ಮಾಚಿದೇವರ ಜಯಂತ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಡಿವಾಳ ಸಮಾಜವು ತನ್ನ ಕುಲಕಸುಬಿನ ಮೂಲಕ ಜೀವನ ನಡೆಸಬೇಕಾಗಿಲ್ಲ. ಶಿಕ್ಷಣ ಬದಲಾವಣೆಯಿಂದ ಸಮುದಾಯ ಮೇಲೆ ಬ ರಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಅವುಗಳನ್ನು ಸದುಪಯೋಗ ಮಾಡಿಕೊಳ್ಳುವ ಮೂಲಕ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದು ಹೇಳಿದರು. 

ಮನುಷ್ಯ ಪುರಸ್ಕಾರ ಗುಣವನ್ನು ರೂಢಿಸಿಕೊಳ್ಳಬೇಕು. ಕೆಟ್ಟದ್ದಕ್ಕೆ ತಾತ್ಕಾಲಿಕ ಸುಖ ಸಿಗುತ್ತದೆ. ಉತ್ತಮ ಕೆಲಸಗಳಿಗೆ ನೆಮ್ಮದಿ ಸಿಗುತ್ತದೆ ಎಂದ ಅವರು, ನಾನು ಮಡಿವಾಳ ಸಮಾಜವನ್ನು ಎಸ್ಸಿಗೆ ಸೇರಿಸಲು ಮುಖ್ಯಮಂತ್ರಿಗಳ ಬಳಿ ಧ್ವನಿ ಎತ್ತುವೆ ಎಂದರು.

ಉಪವಿಭಾಗಾಧಿಕಾರಿ ಟಿ.ವಿ. ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾಚಿದೇವರು 12ನೇ ಶತಮಾನದ ಶರಣರು ಹಾಗೂ ಸಂತರ ಸಮಕಾಲೀನರಾಗಿದ್ದು, ತಮ್ಮ ಕಾಯಕದೊಂದಿಗೆ ವಚನಗಳ ಮೂಲಕ ಗುರುತಿಸಿಕೊಂಡು ತಮ್ಮದೇ ಆದ ಕೊಡುಗೆಯನ್ನು ಸಮಾಜಕ್ಕೆ ನೀಡಿದ್ದು, ಅವರನ್ನು  ಸ್ಮರಿಸೋಣ ಎಂದರು.

ಪುರಸಭೆ ಅಧ್ಯಕ್ಷ ಹೆಚ್.ಎಂ. ಅಶೋಕ್ ಮಾತನಾಡಿ, ದೇಶದ 18 ರಾಜ್ಯಗಳಲ್ಲಿ ಮಾಡಿವಾಳ ಸಮಾಜವು ಪರಿಶಿಷ್ಟ ಜಾತಿ ಪಟ್ಟಿಯಲ್ಲಿದ್ದು, ಇನ್ನು 12 ರಾಜ್ಯಗಳಲ್ಲಿ ಹಿಂದುಳಿದ ವರ್ಗದಲ್ಲಿದ್ದು, ಅವುಗಳನ್ನೂ ಸಹ ಎಸ್ಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಹಾಗೂ ಶಾಸಕರು ಹರಪನಹಳ್ಳಿ ಪಟ್ಟಣದಲ್ಲಿ ಮಡಿವಾಳ ಮಾಚಿದೇವರ ಹೆಸರಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸ್ಥಳಾವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡರು.

ಶಿಕ್ಷಕ ಅಜ್ಜಯ್ಯ ಮಡಿವಾಳ ಸಮಾಜ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಶಿವಕುಮಾರ್ ಬಿರಾದಾರ, ತಾಲ್ಲೂಕು ಮಡಿವಾಳ ಸಮಾಜದ ಅಧ್ಯಕ್ಷ ಮಜ್ಜಿಗೇರಿ ಬಸವರಾಜ, ಪುರಸಭೆ ಸದಸ್ಯರಾದ ಕಿರಣ ಶ್ಯಾನಭಾಗ, ಭರತೇಶ ಜೋಗಿನ್ನರ, ಗೌಳಿ ವಿನಯ, ಜಾರಿಕ್ ಸರ್ಖಾವಸ್, ಎಂ.ಕೆ. ಜಾವಿದ್, ಮುಖಂಡರಾದ ಬಾಗಳಿ ಕೊಟ್ರೇಶ್, ಆರ್. ಲೋಕೇಶ್, ಚಂದ್ರಕಾಂತ, ತೌಡೂರು ಭರಮಪ್ಪ, ಮಡಿವಾಳ ಬಸವರಾಜ, ಕೋಟೆಪ್ಪ, ರೇಖಮ್ಮ ಸೇರಿದಂತೆ ಇತರರು ಇದ್ದರು.

error: Content is protected !!