ವಿದ್ಯಾರ್ಥಿನಿಯರ ಆತ್ಮರಕ್ಷಣೆಗಾಗಿ ಕರಾಟೆ ಅಗತ್ಯ

ವಿದ್ಯಾರ್ಥಿನಿಯರ ಆತ್ಮರಕ್ಷಣೆಗಾಗಿ ಕರಾಟೆ ಅಗತ್ಯ

ಜಗಳೂರು, ಫೆ. 1- ವಿದ್ಯಾರ್ಥಿನಿಯರ ಆತ್ಮರಕ್ಷಣೆಗಾಗಿ ಕರಾಟೆ ಕಲಿಯುವುದು ಅಗತ್ಯ ಎಂದು ತಹಶೀಲ್ದಾರ್ ಸಂತೋಷ್‌ ಕುಮಾರ್ ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಪ.ಜಾತಿ ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಗಾಂಧೀಜಿ ಪುಣ್ಯಸ್ಮರಣೆ ಹಾಗೂ ಕರಾಟೆ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಾಲಾ ಹಂತದಲ್ಲಿ ಪಠ್ಯದ ಜೊತೆ ಪಠ್ಯೇತರ ಚಟುವಟಿಕೆ ವಿದ್ಯಾಭ್ಯಾಸ ಜೀವನಕ್ಕೆ ಭದ್ರ ಬುನಾದಿಯಾ ಗಲಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ನಿರಂತರ ಪರಿಶ್ರಮ ದಿಂದ ಪರೀಕ್ಷೆಗಳಲ್ಲಿ ಅಗ್ರಸ್ಥಾನ ಪಡೆದು ಜಿಲ್ಲೆಯಲ್ಲಿ ಇತಿಹಾಸ ನಿರ್ಮಿಸಬೇಕೆಂದು ಸಲಹೆ ನೀಡಿದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ಮಹೇಶ್ವರಪ್ಪ ಮಾತನಾಡಿ, ಸ್ಥಳೀಯವಾಗಿ ಜಗಳೂರು ಪಟ್ಟಣ ಮತ್ತು ಕಲ್ಲೇದೇವರಪುರ
ನಿಲಯಗಳಲ್ಲಿ ವಾರದಲ್ಲಿ ಎರಡು ದಿನ ಆಯೋಜಿಸಿರುವ ಕರಾಟೆ ತರಬೇತಿಯ ಸದುಪಯೋಗ ಪಡೆದು ಕೊಳ್ಳಬೇಕೆಂದು ತಿಳಿಸಿದರು.

ಮೊಬೈಲ್‌ನಲ್ಲಿ ಕಾಲಹರಣ ಮಾಡದೇ ಪ್ರೋತ್ಸಾಹ ಧನವನ್ನು ಹಾಗೂ ಶಿಷ್ಯವೇತನ ಮತ್ತು ಹಾಸ್ಟೆಲ್‌ಗಳಲ್ಲಿನ ಸರ್ಕಾರದ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಉಜ್ವಲ ಭವಿಷ್ಯ ರೂಪಿಸಿಕೊಂಡು ಪೋಷಕರಿಗೆ, ತಾಲ್ಲೂಕಿಗೆ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು.

ಕರಾಟೆ ತರಬೇತಿ ಶಿಕ್ಷಕಿ ರೇಖಾ ಮಾತನಾಡಿ, ಕರಾಟೆ ತರಬೇತಿಯ ಅವಕಾಶ ಪಡೆದು ಭವಿಷ್ಯದಲ್ಲಿ ನೀವು ಇತರರಿಗೆ ತರಬೇತಿ ನೀಡುವಂತಾಗಲಿ. ಮಹಿಳಾ ಸಬಲೀಕರಣಕ್ಕೆ ದಿಟ್ಟ ನಿರ್ಧಾರ ಅತ್ಯವಶ್ಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಿಲಯ ಮೇಲ್ವಿಚಾರಕಿಯರಾದ ರುಬಿಯಾ, ಶಾಂತಮ್ಮ, ಕರಾಟೆ ತರಬೇತುದಾರರಾದ ರೇಖಾ, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

error: Content is protected !!