ಹಳ್ಳಿಹಾಳ್ : ಸಾಮೂಹಿಕ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಮತ
ಮಲೇಬೆನ್ನೂರು, ಜ.30- ಸಾಮೂಹಿಕ ಪೂಜೆಗಳಿಂದ ಸಮಾಜದಲ್ಲಿ ಸ್ವಾಸ್ಥ್ಯ ಹಾಗೂ ಗ್ರಾಮದಲ್ಲಿ ಸಾಮರಸ್ಯ, ಮನಗಳು ಒಂದಾಗಲು ಸಹಕಾರಿ ಆಗುತ್ತದೆ ಎಂದು ವಿನಾಯಕನಗರ ಕ್ಯಾಂಪಿನ ಕಾಲಜ್ಞಾನಿ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ಸೋಮವಾರ ಹಳ್ಳಿಹಾಳ್ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಗಳಿ ವಲಯದ ವತಿಯಿಂದ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಮಾಜದಲ್ಲಿ ಸಾಕಷ್ಟು ಪರಿವರ್ತನೆಗೆ ಕಾರಣರಾಗಿದ್ದಾರೆ. ಸಾಮೂಹಿಕ ಸತ್ಯನಾರಾಯಣ ಪೂಜೆಯಿಂದ ದ್ವೇಷ, ಅಸೂಯೆ ದೂರವಾಗಿ ಪ್ರೀತಿ, ಶ್ರದ್ಧೆ ಬೆಳೆಯುತ್ತದೆ.
ನಂದಿಗುಡಿ ಬೃಹನ್ಮಠದ ಶ್ರೀ ಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಬಡವರಿಗೆ, ಅನಾರೋಗ್ಯ ಪೀಡಿತರಿಗೆ ಅಗತ್ಯ ಸೌಲಭ್ಯ ಕಲ್ಪಿಸುತ್ತಿರುವ ಈ ಯೋಜನೆ, ಸರ್ಕಾರ ಮಾಡದಂತಹ ಕೆಲಸ ಮಾಡುತ್ತಿದೆ ಎಂದು ಸ್ವಾಮೀಜಿ ಶ್ಲ್ಯಾಘಿಸಿದರು.
ಧಾರ್ಮಿಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ, ಉದ್ಘಾಟಿಸಿದ ಮಾಜಿ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ಈ ಹಿಂದೆ ದೇಶದ ಶೇ.5 ರಷ್ಟು ಜನರಿಗೆ ಮಾತ್ರ ಬ್ಯಾಂಕ್ ವ್ಯವಹಾರ ಗೊತ್ತಿತ್ತು. ಧರ್ಮಸ್ಥಳ ಯೋಜನೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಂದಾಗಿ ಈಗ ದೇಶದ ಶೇ.90 ರಷ್ಟು ಜನ ಬ್ಯಾಂಕಿನ ವ್ಯವಹಾರ ಹೊಂದಿದ್ದಾರೆ. ಇದರಿಂದಾಗಿ ಮಹಿಳೆಯರು ಸಾಕಷ್ಟು ಹಣ ಉಳಿತಾಯ ಮಾಡುವಂತಾಗಿರುವುದು ಸಂತಸ ಎಂದು ಹೇಳಿದರು.
ಜಿ.ಪಂ. ಮಾಜಿ ಅಧ್ಯಕ್ಷ ಎ.ಗೋವಿಂದ ರೆಡ್ಡಿ ಮಾತನಾಡಿ, ಬಡವರಿಗಾಗಿ ಇಂದಿರಾಗಾಂಧಿ ಅವರು 20 ಅಂಶಗಳ ಕಾರ್ಯಕ್ರಮಗಳ ಮೂಲಕ ಜಾರಿಗೆ ತಂದಿದ್ದ ಯೋಜನೆಗಳನ್ನೇ ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯವರು ಪರಿಣಾಮಕಾರಿಯಾಗಿ ಮಾಡುತ್ತಿರುವುದು ಸಮಾಜದಲ್ಲಿ ಹೊಸ ಬದಲಾವಣೆಗೆ ಪೂರಕವಾಗಿದೆ ಎಂದು ಶ್ಲ್ಯಾಘಿಸಿದರು.
ಮಲೇಬೆನ್ನೂರು ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಮಂಜುಳಾಜಿ, ಜಿ.ಪಂ. ಮಾಜಿ ಸದಸ್ಯರಾದ ಎಂ.ನಾಗೇಂದ್ರಪ್ಪ, ಬೆಣ್ಣೆಹಳ್ಳಿ ಹಾಲೇಶಪ್ಪ, ವಿಟಿಯು ವಿಶ್ರಾಂತ ಕುಲಪತಿ ಡಾ. ಹೆಚ್.ಮಹೇಶಪ್ಪ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ಧರ್ಮಸ್ಥಳ ಯೋಜನೆಗಳನ್ನು ಕೊಂಡಾಡಿದರು.
ಗ್ರಾಮದ ಮುಖಂಡ ಹುಲ್ಮನಿ ವೀರನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಯೋಜನೆಯ ಮಲೇಬೆನ್ನೂರು ಯೋಜನಾಧಿಕಾರಿ ವಸಂತ್ ದೇವಾಡಿಗ ಮಾತನಾಡಿದರು.
ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ಜಿ.ಪಂ. ಮಾಜಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಜಿಗಳಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ವಿನೋದ ಹಾಲೇಶ್ ಕುಮಾರ್, ಮಾಜಿ ಅಧ್ಯಕ್ಷೆ ಶ್ರೀಮತಿ ಕವಿತಾ ಮಾಕನೂರು ಶಿವು, ಜಿಗಳಿ ಪಿಎಸಿಎಸ್ ಅಧ್ಯಕ್ಷ ಟಿ.ಹೆಚ್.ಮಂಜುನಾಥ್, ವರ್ತಕ ಚಿಟ್ಟಕಿ ನಾಗರಾಜ್, ತಾ.ಜೆಡಿಎಸ್ ಅಧ್ಯಕ್ಷ ಹೆಚ್.ಟಿ.ಪರಮೇಶ್ವರಪ್ಪ, ಪೂಜಾ ವ್ಯವಸ್ಥಾಪನ ಸಮಿತಿಯ ಗೌರವಾಧ್ಯಕ್ಷರಾದ ಜಿಗಳಿ ಆನಂದಪ್ಪ, ಯಲವಟ್ಟಿ ಯೋಮಕೇಶ್ವರಪ್ಪ, ಅಧ್ಯಕ್ಷ ಪ್ರಕಾಶ್ ಹದಡಿ, ಉಪಾಧ್ಯಕ್ಷ ಜಿ.ಬೇವಿನಹಳ್ಳಿಯ ಬಿ.ಕೆ.ಮಹೇಶ್ವರಪ್ಪ, ಸಹ ಕಾರ್ಯದರ್ಶಿ ಹೆಚ್.ವಿ.
ಚಂದ್ರಶೇಖರ್, ಕೋಶಾಧಿಕಾರಿ ಕೆ.ಜಿ.ಬಸವನಗೌಡ, ಖಜಾಂಚಿ ಜಿಗಳಿಯ ನಾಗಸನಹಳ್ಳಿ ಬಸವರಾಜ್, ಶ್ರೀ ಮುರುಡ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಈರನಗೌಡ, ಬಿ.ಎಲ್.ಗೌಡ, ಹೆಚ್.ಎಸ್.ಮಲ್ಲನಗೌಡ, ಯಲವಟ್ಟಿಯ ಜಿ.ಆಂಜನೇಯ, ಎ.ರಾಮಚಂದ್ರಪ್ಪ, ಡಿ.ಬಸವನಗೌಡ, ಜಿಗಳಿಯ ಗೌಡ್ರ ಬಸವರಾಜಪ್ಪ, ಹೆಚ್.ಡಿ.ಹನುಮಗೌಡ, ಮಾಳಗಿ ತಿಮ್ಮನಗೌಡ, ಮಲೇಬೆನ್ನೂರಿನ ಎಂ.ಬಿ.ಸಜ್ಜು, ಶ್ರೀಮತಿ ಗೌರಮ್ಮ, ಧರ್ಮರಾಜ್, ಯೋಜನೆಯ ಜಿಗಳಿ ವಲಯದ ಮೇಲ್ವಿಚಾರಕರಾದ ಶ್ರೀಮತಿ ಪದ್ಮಾವತಿ ಮತ್ತು ಇತರರು ಭಾಗವಹಿಸಿದ್ದರು.