ದಾವಣಗೆರೆ, ಜ.29- ನಿರಂತರ ಅಭ್ಯಾಸ ಮಾಡುವವರಿಗೆ ಕ್ರೀಡಾ ಕ್ಷೇತ್ರದಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿಯಾಗಿದೆ ಎಂದು ಪಾಲಿಕೆ ಮಾಜಿ ಮೇಯರ್, ಸದಸ್ಯ ಬಿ.ಜಿ. ಅಜಯಕುಮಾರ್ ತಿಳಿಸಿದರು.
ಅವರು, ಇಂದು ನಗರದ ಹೈಸ್ಕೂಲ್ ಮೈದಾನದಲ್ಲಿ ನೆಹರು ಯುವ ಕೇಂದ್ರ, ಯುವ ವ್ಯವಹಾರ ಕ್ರೀಡಾ ಸಚಿವಾಲಯ ಹಾಗೂ ಶ್ರೀ ನವದುರ್ಗಾ ಕ್ರೀಡಾ, ಕಲಾ ಮತ್ತು ಸಾಂಸ್ಕೃತಿಕ ಸಂಘದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಕ್ರೀಡಾಪಟುಗಳು ನಿರಂತರ ಅಭ್ಯಾಸ ಮಾಡುವ ಮೂಲಕ ಬೆವರು ಸುರಿಸಿ ನಿಮ್ಮನ್ನು ಬೆಳೆಸುತ್ತಿರುವ ತಂದೆ – ತಾಯಿ ಕಾಣುತ್ತಿರುವ ಕನಸನ್ನು ಪರಿಪೂರ್ಣಗೊ ಳಿಸಬೇಕು ಎಂದು ಕರೆ ನೀಡಿದರು. ಮನುಷ್ಯ ಆಸ್ಪತ್ರೆಯತ್ತ ಮುಖ ಮಾಡದಂತೆ ಚೆನ್ನಾಗಿ ಬದುಕಬೇಕಾದರೆ ಕ್ರೀಡೆ ಸಹಕಾರಿಯಾ ಗಿದೆ. ಮನುಷ್ಯ ನಿತ್ಯವೂ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗಲಿದೆ. ಇನ್ನು 50 ವರ್ಷಗಳ ಕಾಲ ದೇಶವನ್ನು ಕಟ್ಟಿ ಬೆಳೆಸಿ ರಕ್ಷಣೆ ಮಾಡ ಬೇಕಾಗಿರುವ ಯುವಕರು ಸದೃಢ ಆರೋಗ್ಯ ಹೊಂದ ಬೇಕಾದರೆ, ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಚಿಕ್ಕಂದಿನಿಂದಲೇ ದೇಹ ದಂಡಿಸಿ, ಕ್ರೀಡೆಗಳನ್ನು ಕಲಿತಿರುವ ನೀವು ಅವಕಾಶ ಸಿಕ್ಕಾಗ ಉತ್ತಮ ಪ್ರದರ್ಶನ ನೀಡಿ, ಉತ್ತಮ ಸಾಧನೆ ಮಾಡಬೇಕು. ಅಲ್ಲದೆ, ದೇಶ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಹಳೆ ಚಿಂತನೆ, ವ್ಯವಸ್ಥೆ ಕಿತ್ತು ಕಸದ ಬುಟ್ಟಿಗೆ ಹಾಕಿ ಅಪ್‌ಡೇಟ್ ಆಗಬೇಕು ಎಂದು ಸಲಹೆ ನೀಡಿದರು.
ಶ್ರೀ ನವದುರ್ಗಾ ಕ್ರೀಡಾ, ಕಲಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ರೇಖಾ ರವಿಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಕೆ. ಮಂಜುಳಾ, ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಭುಕ್ಯ ಸಂಜೀವ್, ಗಾಯತ್ರಿ ಹಾಲೇಶ್, ಬಾತಿ ಶಂಕರ್, ಅಶೋಕ್ ಗೋಪನಾಳ್, ಎಸ್.ಜಿ. ಸೋಮ ಶೇಖರ್, ವಿ.ಆರ್. ಸಮಿತ ಸೇರಿದಂತೆ ಇತರರಿದ್ದರು.