ದಾವಣಗೆರೆ, ಜ.29- ಭಾರತದ ಸಂವಿ ಧಾನದ ಆಶಯಗಳಲ್ಲಿ ಯಾವುದೇ ಲೋಪ ದೋಷಗಳಿಲ್ಲ. ಆದರೆ, ಸಂವಿಧಾನವನ್ನು ಅರ್ಥ ಮಾಡಿಕೊಳ್ಳುವಲ್ಲಿ, ಅದನ್ನು ಜಾರಿಗೆ ತರುವಲ್ಲಿ ನಾವುಗಳು ವಿಫಲರಾಗಿದ್ದೇವೆ ಎಂದು ಹಿರಿಯ ನ್ಯಾಯವಾದಿ ಎಲ್.ಎಚ್.ಅರುಣ್‍ಕುಮಾರ್ ಅಭಿಪ್ರಾಯ ಪಟ್ಟರು.
ಗುರುವಾರ ನಗರದ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಪಬ್ಲಿಕ್ ಸ್ಕೂಲ್‍ನಲ್ಲಿ ಆಯೋಜಿಸಲಾಗಿದ್ದ 74ನೇ ಗಣ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋ ಹಣ ನೆರವೇರಿಸಿ ಅವರು ಮಾತನಾಡಿದರು.
ನಾವುಗಳು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದು, ಅದರಲ್ಲಿ ಕೆಲವು ಲೋಪದೋಷಗಳನ್ನು ಸರಿಪಡಿಸಿಕೊ ಳ್ಳಬೇಕಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಅಕ್ರಮ, ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದ್ದು, ಅದನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿ ಕಾನೂನುಗಳನ್ನು ಜಾರಿಗೆ ತರಬೇಕಾಗಿದೆ ಎಂದು ಹೇಳಿದರು.
ಕಳೆದ 73 ವರ್ಷಗಳಲ್ಲಿ ದೇಶ ಎಲ್ಲಾ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಿದೆ. ಆದರೂ ನಮ್ಮ ಮುಂದೆ ಕೆಲವು ಸಮಸ್ಯೆ, ಸವಾಲುಗಳು ಹಾಗೆಯೇ ಉಳಿದಿವೆ. ಈವರೆಗೆ ಸಂವಿಧಾನದಲ್ಲಿ ಹಲವು ತಿದ್ದುಪಡಿಗಳನ್ನು ತರಲಾಗಿದೆ. ಅದೇ ರೀತಿ ಇಂದಿನ ಅಭಿವೃದ್ದಿಗೆ ತಕ್ಕಂತೆ ಸಂವಿಧಾನದಲ್ಲಿ ಕೆಲ ತಿದ್ದುಪಡಿಗಳನ್ನು ತರುವ ಮೂಲಕ ಆಹಾರ, ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಹಕ್ಕುಗಳನ್ನು ಮೂಲಭೂತ ಹಕ್ಕುಗಳನ್ನಾಗಿಸುವ ಮೂಲಕ ಸಂವಿಧಾನದ ಉನ್ನತೀಕರಣ ಮತ್ತು ಜನರ ಸಮಸ್ಯೆಗಳನ್ನು ನಿವಾರಿಸುವಲ್ಲಿ ಮುಂದಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯಾನಿಕೇತನ ವಿದ್ಯಾಸಂಸ್ಥೆಯ ಸಂಸ್ಥಾಪಕ ರುದ್ರಮುನಿ ಮಾತನಾಡಿ, ರಾಷ್ಟ್ರೀಯ ಹಬ್ಬವಾದ ಗಣರಾಜ್ಯೋತ್ಸವವನ್ನು ನಾವೆಲ್ಲರೂ ಇಡೀ ದೇಶದಾದ್ಯಂತ ಹಬ್ಬವಾಗಿ ಆಚರಿಸುತ್ತಿದ್ದೇವೆ. ಸಂವಿಧಾನವೇ ನಮ್ಮೆಲ್ಲರ ಪವಿತ್ರ ಗ್ರಂಥವಾಗಿದೆ. ರಾಜಪ್ರಭುತ್ವ ತ್ಯಜಿಸಿ ಪ್ರಜಾಪ್ರಭುತ್ವದ ನಿಜ ಅಸ್ತಿತ್ವವನ್ನು ಸ್ಥಾಪಿಸಿದ ದಿನವಾದ ಗಣರಾಜ್ಯೋತ್ಸವನ್ನು ನಾವೆಲ್ಲರೂ ಸಡಗರ, ಸಂಭ್ರಮದಿಂದ ನಮ್ಮ ಮನೆ ಹಬ್ಬದಂತೆ ಆಚರಿಸಬೇಕೆಂದು ಕರೆ ನೀಡಿದರು.
ವಿದ್ಯಾಸಂಸ್ಥೆಯ ಅಧ್ಯಕ್ಷೆ ಆರ್.ಮೀನಾಕ್ಷಿ, ಆಡಳಿತಾಧಿಕಾರಿ ಕೆ.ಬಿ.ಆನಂದ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಿ.ಸಿ.ರೇಣುಕಾರಾಧ್ಯ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಜಿ.ಶಕುಂತಲಾ ಇತರರು ಇದ್ದರು.