ರಾಣೇಬೆನ್ನೂರು : ಮತದಾರನೊಲಿಸುವ ಕಾರ್ಯ ಪ್ರಾರಂಭ

ರಾಣೇಬೆನ್ನೂರು : ಮತದಾರನೊಲಿಸುವ ಕಾರ್ಯ ಪ್ರಾರಂಭ

ರಾಣೇಬೆನ್ನೂರು, ಜ.29- ಮೇ ತಿಂಗಳಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಬಯಸುವವರು ಕಳೆದ ನಾಲ್ಕು ತಿಂಗಳುಗಳಿಂದ ವಿವಿಧ ರೀತಿಯ ಕಸರತ್ತಿನ ಮೂಲಕ ಮತದಾರನ್ನೊಲಿಸುವ ಪ್ರಯತ್ನ ನಡೆಸಿದ್ದು, ನಿನ್ನೆಯಿಂದ ಜೆಡಿಎಸ್ ಮನೆ-ಮನೆಗೆ ಕರಪತ್ರ ಮುಟ್ಟಿಸುವ ಕಾರ್ಯ ಪ್ರಾರಂಭಿಸಿದೆ.

ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಾಗ ಬಯಸುವವರು ಜಿಲ್ಲೆ, ರಾಜ್ಯ ಹಾಗೂ ದೆಹಲಿಯ ವರಿಷ್ಠರ ಮನವೊಲಿಸುವ ಕಾರ್ಯ ನಡೆಸಿದ್ದಾರೆ. ಯಾರೂ ಟಿಕೆಟ್ ಕೊಡದಿದ್ದರೆ ಪಕ್ಷೇತರರಾಗಿ ಸ್ಪರ್ಧಿಸುವವರು ತಮ್ಮ ಪ್ರಣಾಳಿಕೆಗಳೊಂದಿಗೆ ವಿವಿಧ ಮಜಲುಗಳ ಮೂಲಕ ಮತದಾರರ ಓಲೈಕೆಯಲ್ಲಿ ನಿರತರಾಗಿದ್ದಾರೆ.

ಮತಗಟ್ಟೆ ವ್ಯಾಪ್ತಿಗೆ ಪ್ರತಿನಿಧಿಗಳನ್ನು ನೇಮಿಸುವ, ರೊಟ್ಟಿಬುತ್ತಿಯೊಂದಿಗೆ ಬಂದು ಜೈಕಾರ ಹಾಕಿಸುವ, ಗ್ರಾಮಗಳಲ್ಲಿ ಪಾದಯಾತ್ರೆ ಹಾಗೂ ವಾಸ್ತವ್ಯ, ಮೊದಲು ಕೂಪನ್ ಕೊಟ್ಟು ನಂತರ ಕುಕ್ಕರ್ ಕೊಡುವ, ಇತರೆ ಪಕ್ಷದ ಓಣಿಯ ಮುಖಂಡರನ್ನು ತಮ್ಮತ್ತ ಸೆಳೆಯುವ, ಸಸ್ಯಹಾರಿ, ಮಾಂಸಾಹಾರಿ ಊಟ, ಕಷ್ಟ- ಸುಖಗಳಲ್ಲಿ ಬಾಗಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ, ಉದ್ಯೋಗ ಮೇಳ, ಆರೋಗ್ಯ ತಪಾಸಣೆ, ಚಿಕಿತ್ಸೆ, ಕಲಾವಿದರಿಗೆ ಪ್ರೋತ್ಸಾಹ ಮುಂತಾದ ಹತ್ತಾರು ತಂತ್ರಗಾರಿಕೆಗಳೊಂದಿಗೆ ನಿತ್ಯ ಮತದಾರನ ಸಂಪರ್ಕ ನಡೆದಿದೆ.

ಜೆಡಿಎಸ್‌ನಿಂದ ಅಧಿಕೃತ ಅಭ್ಯರ್ಥಿಯಾಗಿರುವ ಮಂಜುನಾಥ ಗೌಡಶಿವಣ್ಣನವರ, ಮಾಜಿ ಸಭಾಪತಿ ಕೆ.ಬಿ.ಕೋಳಿವಾಡ ಅವರ ಪುತ್ರ ಪ್ರಕಾಶ್‌, ಮಕ್ಕಳ ತಜ್ಞ ಡಾ. ಪ್ರವೀಣ ಖನ್ನೂರ, ಎಪಿಎಂಸಿ ಮಾಜಿ ನಿರ್ದೇಶಕ ಜಟ್ಟೆಪ್ಪ ಕರೇಗೌಡ, ಬಿಜೆಪಿಯಿಂದ ಹಾಲಿ ಶಾಸಕ ಅರುಣಕುಮಾರ ಪೂಜಾರ, ಬಿಜೆಪಿ ಆಕಾಂಕ್ಷಿಯಿಂದ ಆಭ್ಯರ್ಥಿ ಹಂತ ತಲುಪಿದ ಸಂತೋಷ ಪಾಟೀಲ, ಬಿಜೆಪಿ ಟಿಕೆಟ್ ಕೊಡದಿದ್ದರೆ ಪಕ್ಷೇತರರಾಗುವ ಇಂಗಿತದಲ್ಲಿರುವ ಮೇಲ್ಮನೆ ಸದಸ್ಯ ಆರ್.ಶಂಕರ್, ತಮ್ಮ ಮದುವೆಯ ಜೊತೆ 132 ಜೋಡಿಗಳಿಗೆ ಮದುವೆ ಮಾಡಿಸಿ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ.ರವಿ ನೇತೃತ್ವದಲ್ಲಿ  ತಲಾ 25 ಸಾವಿರ ರೂ. ಸಹಾಯ ಧನ ವಿತರಿಸಿದ ನಗರಸಭೆ ಸದಸ್ಯ ಪ್ರಕಾಶ ಬುರಡಿಕಟ್ಟಿ ಹೆಸರು ಸಹ ಹಿಂದೂ ಪರ ಸಂಘಟನೆ ಮೂಲಕ ಬಿಜೆಪಿ ಅಭ್ಯರ್ಥಿ ಆಗಬಹುದು ಎನ್ನುವ ಮಾತುಗಳು ಹರಿದಾಡುತ್ತಿವೆ.

ಆಮ್ ಆದ್ಮಿ ಪಾರ್ಟಿ ವಿರೋಧ : ಚುನಾವಣೆ ಹಿನ್ನೆಲೆಯಲ್ಲಿ ರಾಣೇಬೆನ್ನೂರು ವಿದಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಎಲ್ಲಾ ಚಟುವಟಿಕೆಗಳಿಂದ ಭ್ರಷ್ಟಾಚಾರದ ತಾಂಡವ ನೃತ್ಯ ಹೆಚ್ಚಾಗುತ್ತದೆ. ಮತದಾರರಿಗೆ ಅಮಿಷಗಳನ್ನೊಡ್ಡಿ ಆಯ್ಕೆಯಾದವರು ಮಿತಿ ಮೀರಿದ ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ. ಸರ್ಕಾರ ಇದಕ್ಕೆ ಕಡಿವಾಣ ಹಾಕಬೇಕು. ಆಮ್ ಆದ್ಮಿ ಪಾರ್ಟಿಯ ಮನವಿಗೆ ಅಧಿಕಾರಿಗಳು ಸ್ಪಂದಿಸಿ, ಭ್ರಷ್ಟಾಚಾರ ತಡೆಯುವಲ್ಲಿ ದಕ್ಷತೆ ಪ್ರದರ್ಶಿಸಬೇಕು. ನಿಮ್ಮ ಜೊತೆ ನಾವು ಹೋರಾಡುತ್ತೇವೆ ಎಂದು ಪಾರ್ಟಿಯ ಹುರಿಯಾಳಾಗ ಬಯಸಿರುವ ಹನುಮಂತಪ್ಪ ಕಬ್ಬಾರ ಪ್ರಕಟಣೆ ಹೊರಡಿಸಿದ್ದಾರೆ.

error: Content is protected !!