ಹೊಸದುರ್ಗ ಕನಕ ಗುರುಪೀಠದ ಶ್ರೀ ಈಶ್ವರನಾನಂದಪುರಿ ಸ್ವಾಮೀಜಿ
ಹೊನ್ನಾಳಿ, ಜ.27- ಸಮಾಜದಲ್ಲಿ ಭಾವೈಕ್ಯತೆಯಿಂದ ಬಾಳುವುದೇ ನಿಜವಾದ ಮಾನವ ಧರ್ಮ ಎಂದು ಹೊಸದುರ್ಗ ಕನಕ ಗುರು ಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.
ಪಟ್ಟಣದ ದೇವನಾಯ್ಕನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀದುರ್ಗಮ್ಮ ದೇವಿ, ಶ್ರೀ ಮರಿಯಮ್ಮ ದೇವಿ, ಮತ್ತು ಶ್ರೀಗಾಳಿ ದುರ್ಗಮ್ಮ ದೇವಸ್ಥಾನಗಳ ಪ್ರವೇಶ, ಮೂರ್ತಿಗಳ ಪ್ರತಿಷ್ಠಾಪನೆ, ಕಳಸಾರೋಹಣ ಹಾಗೂ ಕುಂಭಾಭಿಷೇಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧರ್ಮ-ಧರ್ಮಗಳ ನಡುವೆ ಭೇದಭಾವ ಮಾಡಿ ಬೆಂಕಿ ಹಚ್ಚುವವರನ್ನು ಕ್ಷಮಿಸಬಾರದು. ಜಗತ್ತಿನಲ್ಲಿ ಮಾನವ ಧರ್ಮಕ್ಕಿಂತ ದೊಡ್ಡ ಧರ್ಮ ಬೇರೆ ಯಾವುದೇ ಧರ್ಮ ಇಲ್ಲ. ನಾಡಿನ ಅನೇಕ ಕಡೆಗಳಲ್ಲಿ ಮಂದಿರ, ಮಸೀದಿಗಳು ಅಕ್ಕಪಕ್ಕದಲ್ಲಿರುವ ಉದಾಹರಣೆಗಳಿವೆ. ಇಲ್ಲೂ ಮೂವರು ದೇವಿಯವರ ನೂತನ ದೇವಾಲಯ ಕೂಡ ಮಸೀದಿಯ ಅತೀ ಸಮೀಪದಲ್ಲೇ ಇದೆ. ಇದೂ ಕೂಡ ಭಾವೈಕ್ಯತೆಗೆ ಶ್ರೇಷ್ಟ ಉದಾಹರಣೆ ಯಾಗಿ ಮುಂದೆ ಇತರರಿಗೆ ಮಾದರಿಯಾಗಬೇಕು ಎಂದು ಹೇಳಿದರು. ಶತಮಾನಗಳ ಹಿಂದೆ ಆಸ್ಪತ್ರೆಗಳೇ ಇರದ ಕಾಲದಲ್ಲಿ ಜನರು ಅನಾರೋಗ್ಯಕ್ಕೆ ಪರಿಹಾರವಾಗಿ ದೇವರ ಮತ್ತು ಅರ್ಚಕರ ಮೋರೆ ಹೋಗಿ ಅರ್ಚಕರು ನೀಡುವ ಗಿಡಿಮೂಲಿಕೆಗಳನ್ನೇ ನಂಬಿ ಸ್ವೀಕರಿಸಿ ರೋಗಮುಕ್ತರಾಗುತ್ತಿದ್ದ ಕಾಲವಿತ್ತು. ಇದಕ್ಕೆ ಮೂಲ ನಂಬಿಕೆಯೇ ಕಾರಣವಾಗಿದ್ದಿತು .
ಕಾರ್ಯಕ್ರಮದ ಸಾನ್ನಿಧ್ಯವನ್ನು ಹೊನ್ನಾಳಿ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿ ಕಾರ್ಜನ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು.
ಮಾಜಿ ಶಾಸಕ ಡಿ.ಜಿ.ಶಾಂತನಗೌಡ ಮಾತನಾಡಿ, ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ 14 ರವರೆಗೆ ಅನೇಕ ದೇವಸ್ಥಾನಗಳ ಉದ್ಘಾಟನೆ ಇರುವುದನ್ನು ಗಮನಿಸಿದರೆ ಮಾತಿಗೆ ಬರಗಾಲ ಎಂದು ಕರೆದರೂ, ದೇವಸ್ಥಾನಗಳನ್ನು ನಿರ್ಮಿಸುವ ಭಕ್ತರುಗಳಲ್ಲಿರುವ ಭಕ್ತಿಗೆ ಬರಗಾಲವಿಲ್ಲ ಎಂದು ಹೇಳಿದರು.
ಕುರುಬ ಸಮಾಜದ ಮುಖಂಡ ಎಚ್.ಬಿ.ಮಂಜಪ್ಪ ಮಾತನಾಡಿ, ಕೇವಲ 14 ತಿಂಗಳಲ್ಲಿ ಭಕ್ತರ ಅದಮ್ಯ ಉತ್ಸಾಹ, ಸೇವಾ ಮನೋಭಾವನೆಯ ಪ್ರತೀಕವಾಗಿ ಇಂದು ಸುಂದರ ದೇವಾಲಯ ನಿರ್ಮಾಣವಾಗಿದೆ. ಇದಕ್ಕೆ ಮುಖಂಡ ತೆಂಗಿನ ಮರದ ಮಾದಪ್ಪ ಹಾಗೂ ಎಚ್.ಬಿ. ಗಿಡ್ಡಪ್ಪ ಸೇರಿದಂತೆ ಸಮಿತಿಯ ಎಲ್ಲಾ ಸದಸ್ಯರುಗಳ ಅರ್ಪಣಾ ಮನೋಭಾವ ಕಾರಣವಾಗಿದ್ದು ಸುಮಾರು 20 ಲಕ್ಷಕ್ಕೂ ಹೆಚ್ಚಿನ ಹಣ ಖರ್ಚಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುರುಬ ಸಮಾಜದ ಅಧ್ಯಕ್ಷ ಎಂ.ಎಸ್.ಪಾಲಾಕ್ಷಪ್ಪ, ಜಿ.ಪಂ. ಮಾಜಿ ಸದಸ್ಯ ಎಂ.ಆರ್.ಮಹೇಶ್, ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರಂಗನಾಥ್, ಹಿರಿಯರಾದ ಎಚ್.ಬಿ.ಗಿಡ್ಡಪ್ಪ, ಕುರುಬ ಸಮಾಜದ ಅಧ್ಯಕ್ಷ ಬಿ.ಬೀರಪ್ಪ, ಗಣಮಗ ಅಣ್ಣಪ್ಪ ಗುಡ್ಡಜ್ಜಿ, ಬುದ್ದಿವಂತರ ನರಸಿಂಹಪ್ಪ, ನರಸಪ್ಪ ಗೌಡ್ರು, ವಿಜೇಂದ್ರಪ್ಪ, ಗಾಳಿ ನಾಗರಾಜ್, ತಮ್ಮಣ್ಣ, ಪೆೊಲೀಸ್ ಉಮೇಶ್, ಕವಳಿ ಮಂಜುನಾಥ್, ಮಾಜಿ ಸೈನಿಕ ಎಂ. ವಾಸಪ್ಪ, ಮಾದಪ್ಪ, ಜಾಮೀಯಾ ಮಸೀದಿ ಅಧ್ಯಕ್ಷ ನಯಾಜ್, ನವಲೆ ಕೃಷ್ಣಪ್ಪ ಸೇರಿದಂತೆ ಸಮಾಜದ ಅನೇಕ ಗಣ್ಯರು ಇದ್ದರು.
ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಗಾಳಿ ರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಕಾಳಿಂಗ ಸ್ವಾಗತಿಸಿದರು. ಕತ್ತಿಗೆ ನಾಗರಾಜ್ ನಿರೂಪಿಸಿದರು.