ಉತ್ತಮ ಜನಪ್ರತಿನಿಧಿ ಆಯ್ಕೆ ನಮ್ಮೆಲ್ಲರ ಹೊಣೆ

ಉತ್ತಮ ಜನಪ್ರತಿನಿಧಿ ಆಯ್ಕೆ ನಮ್ಮೆಲ್ಲರ ಹೊಣೆ

ಜಗಳೂರು ತಹಶೀಲ್ದಾರ್ ಸಂತೋಷ್ ಕುಮಾರ್

ಜಗಳೂರು, ಜ.25- ಯಾವುದೇ  ಹಣ, ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಿ ಉತ್ತಮ ಜನಪ್ರತಿನಿಧಿಗಳ ಆಯ್ಕೆ ಮಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಯುವ ಜನಾಂಗ ಮುಂದಾಗಬೇಕು ಎಂದು ತಹಶೀಲ್ದಾರ್ ಸಂತೋಷ್ ಕುಮಾರ್ ತಿಳಿಸಿದರು.

ಪಟ್ಟಣದ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ರಾಷ್ಟ್ರೀಯ ಮತದಾನ ದಿನಾಚರಣೆ” ಕಾರ್ಯಕ್ರಮದಲ್ಲಿ ಅವರು ನೂತನ ಚುನಾವಣೆ ಗುರುತಿನ ಚೀಟಿ ವಿತರಿಸಿ ಅವರು ಮಾತನಾಡಿದರು.

18 ವರ್ಷ ಮೇಲ್ಪಟ್ಟ ಯುವ ಸಮೂಹ ಪವಿತ್ರವಾದ ಮತವನ್ನು ಚಲಾಯಿಸಲು ಅರ್ಜಿ ನಮೂನೆ 6ರಲ್ಲಿ ಆನ್‌ಲೈನ್ ಸಲ್ಲಿಸಿ, ಸಂವಿಧಾನ ಬದ್ಧ ಹಕ್ಕನ್ನು ಸದುಪಯೋಗ ಪಡೆದುಕೊಳ್ಳಬೇಕು‌.ಉತ್ತಮ ಜನಪ್ರತಿನಿಧಿ ಆಯ್ಕೆ ನಮ್ಮೆಲ್ಲರ ಹೊಣೆ ಎಂದು ಕರೆ ನೀಡಿದರು.

ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಮತದಾನಕ್ಕಿಂತ ಇನ್ನೊಂದಿಲ್ಲ. ನಾನು ಖಚಿತವಾಗಿ ಮತದಾನ ಮಾಡುವೆ’ ಎಂಬ ಘೋಷವಾಕ್ಯದೊಂದಿಗೆ ಆಯೋಗ ಜಾಗ್ರತಿ ಮೂಡಿಸುತ್ತಿದೆ ಎಂದರು.

ಜೆಎಂಎಫ್‌ಸಿ ನ್ಯಾಯಾಲಯದ ಸರ್ಕಾರಿ ಸಹಾಯಕಿ ಡಿ.ರೂಪ ಮಾತನಾಡಿ,  ಮತದಾನ ಸಂವಿಧಾನಬದ್ದ ಹಕ್ಕು, ಯಾವುದೇ ಆಸೆ, ಆಮಿಷಗೊಳಗಾಗಿ ಮತವನ್ನು ಮಾರಾಟ ಮಾಡಬಾರದು ಎಂದರು.

ನಮ್ಮನ್ನಾಳುವ ಉತ್ತಮ ಜನಪ್ರತಿ ನಿಧಿಗಳನ್ನು ಆಯ್ಕೆ ಮಾಡುವ ಸಂಪೂರ್ಣ ಅಧಿಕಾರ ಮತದಾರನಿಗಿದೆ. ಆದರೆ ಕ್ಷಣಿಕವಾದ  ಹಣ, ಇತರೆ ಆಮಿಷಗಳಿಗೆ ಅಮೂಲ್ಯ ಮತವನ್ನು ಮಾರಿಕೊಳ್ಳದೆ.ಉತ್ತಮ ನಾಯಕನನ್ನು ಚುನಾವಣೆಯಲ್ಲಿ ಗೆಲ್ಲಿಸಿ, ಸಾಮಾಜಿಕ ಭದ್ರತೆ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಸೇರಿದಂತೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

error: Content is protected !!