ಜಗಳೂರು: ಮೊಬೈಲ್‌ನಿಂದ ದೂರವಿದ್ದರೆ ಉತ್ತಮ ಶಿಕ್ಷಣ

ಜಗಳೂರು: ಮೊಬೈಲ್‌ನಿಂದ ದೂರವಿದ್ದರೆ ಉತ್ತಮ ಶಿಕ್ಷಣ

 ಕ್ಲಸ್ಟರ್ ಮಟ್ಟದ `ಕಲಿಕಾ ಹಬ್ಬ’ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಸಲಹೆ

ಜಗಳೂರು, ಜ. 23- ಪ್ರೌಢಶಾಲೆ ಹಂತದಲ್ಲಿ ವಿದ್ಯಾರ್ಥಿಗಳು ಮೊಬೈಲ್ ನಿಂದ ದೂರ ವಿದ್ದು, ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಪ್ರಭಾರ ಇಓ ಚಂದ್ರಶೇಖರ್ ಹೇಳಿದರು.

ತಾಲ್ಲೂಕಿನ ದೊಣ್ಣೆಹಳ್ಳಿ ಪ್ರೌಢಶಾಲೆ ಆವರಣದಲ್ಲಿಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಇಲಾಖೆ ಹಾಗೂ ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಕಲಿಕಾ ಚೇತರಿಕೆ ವರ್ಷದ ಅಂಗವಾಗಿ ಹಮ್ಮಿಕೊಂಡಿರುವ ಕ್ಲಸ್ಟರ್ ಮಟ್ಟದ “ಕಲಿಕಾ ಹಬ್ಬ” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲಿ ಜರುಗುವ ಕಲಿಕಾ ಹಬ್ಬ ಖಾಸಗಿ ಶಾಲೆಗಳಲ್ಲಿ ಜರುಗುವ ಅದ್ಧೂರಿ ವಾರ್ಷಿಕೋತ್ಸವ ಕಾರ್ಯಕ್ರಮದಂತೆ ಭಾಸವಾಗುತ್ತದೆ. ಪ್ರೌಢಶಾಲೆ ಹಂತದ ಕಲಿಕೆ ದಶಕಗಳ ಕಾಲ ಸ್ಮೃತಿಯಾಗಿರುತ್ತದೆ. ಶಿಕ್ಷಕರ ಬೋಧನೆ, ಮಾರ್ಗದರ್ಶನ ಮಹತ್ವದ್ದಾಗಿದೆ ಎಂದರು.

ವಿವೇಕ ಶಾಲೆ ಎಂಬ ಯೋಜನೆಯಡಿ ಶಾಲಾ ಕಟ್ಟಡಕ್ಕೆ, ಮನರೇಗಾ ಯೋಜನೆಯಡಿ ಶೌಚಾಲಯ ನಿರ್ಮಾಣ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಲಾ ಕಾಂಪೌಂಡ್, ಹಸಿರೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಮಾತನಾಡಿ, ಮಕ್ಕಳಲ್ಲಿ ಸ್ವಯಂ ಕಲಿಕಾ ಚಟುವಟಿಕೆ ಆಧಾರಿತ ಪರಿಣಾಮಕಾರಿ ಶಿಕ್ಷಣಕ್ಕೆ ಕಲಿಕಾ ಹಬ್ಬ ಪೂರಕ ವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ನಿರ್ದೇಶನದಂತೆ ತಾಲ್ಲೂಕಿನ ವಿವಿಧ ಕ್ಲಸ್ಟರ್ ಮಟ್ಟದಲ್ಲಿ ಕಲಿಕಾಚೇತರಿಕೆ ಕಾರ್ಯಕ್ರಮವನ್ನು ಹಂತ ಹಂತವಾಗಿ ತರಬೇತಿ ನಡೆಸಲಾಗುತ್ತಿದೆ. ದೊಣ್ಣೆಹಳ್ಳಿ ಗ್ರಾಮದ ಕಲಿಕಾ ಹಬ್ಬದ ಸಂಭ್ರಮ, ಅದ್ದೂರಿಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಗ್ರಾಮಸ್ಥರು ವೈಯಕ್ತಿಕ ಕೆಲಸ ಬದಿಗೊತ್ತಿ ಒಗ್ಗಟ್ಟಿನಿಂದ ಶಿಕ್ಷಣ ಇಲಾಖೆಯ ಕಲಿಕಾ ಹಬ್ಬಕ್ಕೆ ಪ್ರೋತ್ಸಾಹ ಶ್ಲಾಘನೀಯ. ಕಲಿಕಾ ಚೇತರಿಕೆ ಕಾರ್ಯಕ್ರಮ ನಾಲ್ಕು ವಿಷಯ ವಸ್ತುಗಳಾದ  ಕಾಗದ ಬಣ್ಣ ಕತ್ತರಿ, ಊರು ಸುತ್ತೋಣ, ಮಾಡು-ಆಡು, ಸೆಲ್ಫಿ ಕಾರ್ನರ್ ಒಳಗೊಂಡಿದೆ. ಇವುಗಳು ಮಕ್ಕಳ ಆಸಕ್ತಿ, ಪೋಷಕರ ಮೆಚ್ಚುಗೆಗೆ ಪಾತ್ರವಾಗುತ್ತವೆ ಎಂಬ ನಂಬಿಕೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಹಾಗೂ  ಶಾಲಾ ಮುಖ್ಯ ಶಿಕ್ಷಕ ಬಿ.ಆರ್. ಚಂದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಮಹಾಮಾರಿ ಕೋವಿಡ್  ಹಿನ್ನೆಲೆಯಲ್ಲಿ ಭೌತಿಕ ತರಗತಿಗಳ ಕೊರತೆಯಿಂದ ಕಲಿಕಾ ಪ್ರಗತಿ ಕುಂಠಿತವಾಗಿತ್ತು. ಸರ್ಕಾರ ಕಲಿಕಾ ಹಬ್ಬ ಕಾರ್ಯಕ್ರಮದ  ಮೂಲಕ  ಭಾಷಾ, ಕೌಶಲ್ಯ, ಪ್ರತಿಭೆಗಳ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಶ್ವೇತಾ ಬಸವರಾಜ್, ಸದಸ್ಯರಾದ ರಾಮು, ಗುರುಮೂರ್ತಿ, ಸಾವಿತ್ರಮ್ಮ, ಶಿಕ್ಷಕರ ಸಂಘದ ಜಗನ್ನಾಥ ರೆಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಜ್ಞಾನೇಂದ್ರಪ್ಪ, ಉಪಪ್ರಾಂಶುಪಾಲ ಹಾಲಪ್ಪ, ಪತ್ರಕರ್ತ  ಅಣಬೂರು  ಕೊಟ್ರೇಶ್, ಅಕ್ಷರ ದಾಸೋಹ ಅಧಿಕಾರಿ ಶ್ರೀನಿವಾಸ್, ಮುಖ್ಯ ಶಿಕ್ಷಕರಾದ ಹುಸೇನ್ ಷರೀಫ್, ವೀರೇಶ್, ಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.

error: Content is protected !!