ದಾವಣಗೆರೆ,ಸೆ.26- ನಗರದ ಹಲವಾರು ಖಾಸಗಿ ಆಸ್ಪತ್ರೆಗಳಿಗೆ ಇಂದು ಬೆಳಿಗ್ಗೆ ದಿಡೀರ್ ಭೇಟಿ ನೀಡಿದ ಜಿಲ್ಲಾದಿಕಾರಿ ಮಹಾಂತೇಶ್ ಬೀಳಗಿ ಅವರು ಆಸ್ಪತ್ರೆಗಳಲ್ಲಿನ ಸ್ವಚ್ಛತೆ, ರೋಗಿಗಳ ತಪಾಸಣೆ ಮತ್ತಿತರೆ ಕುರಿತಂತೆ ಪರಿಶೀಲನೆ ನಡೆಸಿದರು.
ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಭೇಟಿಯಿತ್ತ ಅವರು, ವೈದ್ಯರು, ಶುಶ್ರೂಷಕರು, ಸಿಬ್ಬಂದಿ ವರ್ಗದವರು ಮತ್ತು ರೋಗಿಗಳನ್ನು ಮಾತನಾಡಿಸಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿವಳಿಕೆ ನೀಡಿದರು.
ಸಿಟಿ ಮೆಡಿಕಲ್ ಸೆಂಟರ್, ಆರೈಕೆ ಆಸ್ಪತ್ರೆ, ಸುಕ್ಷೇಮ ಆಸ್ಪತ್ರೆ, ಆಶ್ರಯ ಆಸ್ಪತ್ರೆ, ಸನ್ ಶೈನ್ ಆಸ್ಪತ್ರೆ, ಸೌಖ್ಯದಾ ಆಸ್ಪತ್ರೆ, ಸಿಟಿ ಸೆಂಟ್ರಲ್ ಆಸ್ಪತ್ರೆ ಮುಂತಾದ ಖಾಸಗಿ ಆಸ್ಪತ್ರೆಗಳಲ್ಲಿನ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿದರು.
ಆಸ್ಪತ್ರೆಗಳಲ್ಲಿ ದೊರೆಯುತ್ತಿರುವ ವಿವಿಧ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಎಲ್ಲರನ್ನು ಪ್ರತ್ಯೇಕವಾಗಿ ಮಾತನಾಡಿಸಿದ ಡಿಸಿ ಬೀಳಗಿ, ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆದ್ಯತೆ ನೀಡಬೇಕು ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಪ್ರಭಾರ ಆರೋಗ್ಯಾಧಿಕಾರಿ ಡಾ. ಮೀನಾಕ್ಷಿ, ಜಿಲ್ಲಾಧಿಕಾರಿಗಳ ಆಪ್ತ ಸಹಾಯಕರಾದ ಶಿರಸ್ತೇದಾರ್ ಬಿ.ಡಿ. ಮರುಳಸಿದ್ದಪ್ಪ ಮತ್ತಿತರರು ಜಿಲ್ಲಾಧಿಕಾರಿಗಳೊಂದಿಗಿದ್ದರು.