ದಾವಣಗೆರೆ, ಸೆ.24- ವ್ಯಕ್ತಿಯೋರ್ವರ ಕಾಳಜಿಯಿಂದ ದೇವಸ್ಥಾನಕ್ಕೆ ಕನ್ನ ಹಾಕಲು ಬಂದು ತಪ್ಪಿಸಿಕೊಂಡಿದ್ದ ಇಬ್ಬರು ಇದೀಗ ಪೊಲೀಸರ ಅತಿಥಿಯಾಗಿದ್ದು, ಒಟ್ಟು 8 ದೇವಸ್ಥಾನಗಳ ಕಳವು ಪ್ರಕರಣಗಳನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಬೇಧಿಸಿ, 1 ಲಕ್ಷ ಮೌಲ್ಯದ ಬೆಳ್ಳಿ, ಬಂಗಾರದ ಆಭರಣಗಳು ಮತ್ತು ಹುಂಡಿಯಲ್ಲಿದ್ದ ನೋಟು, ಚಿಲ್ಲರೆ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಮಲೇಬೆನ್ನೂರಿನ ಟಿಪ್ಪು ನಗರದ ಅಕ್ಕಸಾಲಿಗ ಮನೋಜ್, ಹರಿಹರ ತಾಲ್ಲೂಕು ಆಶ್ರಯ ಕಾಲೋನಿಯ ಲಾರಿ ಕ್ಲೀನರ್ ಹಾಲೇಶ್ ಅವರು ಬಂಧಿತರು. ಮತ್ತೊಬ್ಬ ಆರೋಪಿ ವಿಕ್ರಮ್ ಅಲಿಯಾಸ್ ವಿಕ್ರಂ ರಾಥೋಡ್ ತಲೆ ಮರೆಸಿಕೊಂಡಿದ್ದಾನೆ.
ಇದೇ ದಿನಾಂಕ 20ರ ಬೆಳಗಿನ ಜಾವ ಶಿರಮಗೊಂಡನಹಳ್ಳಿಯ ಶ್ರೀ ಉಡುಸಲಮ್ಮ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಲು ಪ್ರಯತ್ನಿಸುತ್ತಿದ್ದರು. ಆಗ ದಾವಣಗೆರೆಯಿಂದ ಹದಡಿ ಕಡೆಗೆ ಸಾಗುತ್ತಿದ್ದ ಅಜಯ್ ಎಂಬ ವ್ಯಕ್ತಿ ಇದನ್ನು ಕಂಡ ತಕ್ಷಣವೇ ತನ್ನ ವಾಹನವನ್ನು ನಿಲ್ಲಿಸಿ ವಿಚಾರಿಸಿದ್ದಲ್ಲದೇ, ಕಳ್ಳರ ಪೋಟೋ ತೆಗೆದು ಅಲ್ಲಿಯೇ ನಿಂತಿದ್ದ ಮೋಟಾರು ಬೈಕನ್ನು ನೋಡುತ್ತಿದ್ದಾಗ ಕಳ್ಳರು ತಮ್ಮ ದ್ವಿಚಕ್ರ ವಾಹನವನ್ನು ಬಿಟ್ಟು ಓಡಿ ಹೋಗಿದ್ದರು.
ತಕ್ಷಣವೇ ಈ ವಿಚಾರವಾಗಿ ಅಜಯ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡು ಗ್ರಾಮಾಂತರ ಉಪವಿಭಾಗದ ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ಮಾರ್ಗದರ್ಶನದಲ್ಲಿ ರಚಿಸಲಾಗಿದ್ದ ಗ್ರಾಮಾಂತರ ವೃತ್ತ ನಿರೀಕ್ಷಕ ಬಿ. ಮಂಜುನಾಥ, ಪಿಎಸ್ ಐಗಳಾದ ಎಂ. ಪಾಷಾ, ಅಶ್ವಿನ್ ಕುಮಾರ್, ಸಿಬ್ಬಂದಿಗಳಾದ ಜೋವಿತ್ ರಾಜ್, ದೇವೇಂದ್ರ ನಾಯ್ಕ, ನಾಗರಾಜಯ್ಯ ಒಳಗೊಂಡ ತಂಡದಿಂದ ತನಿಖೆ ಕೈಗೊಂಡು ಸೆ.23ರಂದು ಮಲೇಬೆನ್ನೂರು ಬಸ್ ನಿಲ್ದಾಣ ಹತ್ತಿರ ಇಬ್ಬರನ್ನು ಬಂಧಿಸಲಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಆರೋಪಿ ಗಳು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ 3, ಮಲೇಬೆನ್ನೂರು, ಹರಿಹರ ಗ್ರಾಮಾಂತರ, ಬಸವಾ ಪಟ್ಟಣ, ಹದಡಿ ಠಾಣೆ ಹಾಗೂ ಗದಗ ಜಿಲ್ಲೆಯ ಮುಂಡರಗಿ ಠಾಣಾ ವ್ಯಾಪ್ತಿಗಳಲ್ಲಿ ತಲಾ ಒಂದು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್ಪಿ ಹನುಮಂತ ರಾಯ ಗ್ರಾಮಾಂತರ ಪೊಲೀಸ್ ಠಾಣಾ ಆವರಣದಲ್ಲಿ ಇಂದು ಸಂಜೆ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಸಾರ್ವಜನಿಕರ ಸಹಭಾಗಿತ್ವ ಇದ್ದರೆ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಇದೀಗ ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಅಜಯ್ ಕುಮಾರ್ ಅವರಿಗೆ ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಲಾಗುವುದು ಎಂದು ಅವರು ತಿಳಿಸಿದರು.