ರೈತರು ಮತ್ತು ಕಾರ್ಮಿಕರ ಹೋರಾಟಕ್ಕೆ ಬೆಂಬಲ
ದಾವಣಗೆರೆ, ಸೆ.23- ನಾಡಿದ್ದು ದಿನಾಂಕ 25 ರ ಶುಕ್ರವಾರ ರೈತರು, ಕಾರ್ಮಿಕರು ನಡೆಸುವ ಹೋರಾಟಕ್ಕೆ ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಬೆಂಬಲ ಸೂಚಿಸಿ ಪ್ರತಿಭಟನೆಗಿಳಿಯಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರು, ಕಾರ್ಮಿಕರಿಗೆ ಸಂಬಂಧಿಸಿದ ಕಾಯ್ದೆಗಳಿಗೆ ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿಯನ್ನು ಮಾಡುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಒಕ್ಕೂಟದ ಗೌರವಾಧ್ಯಕ್ಷ ಕೆ.ಜಿ. ಯಲ್ಲಪ್ಪ ಸುದ್ದಿಗೋಷ್ಠಿಯಲ್ಲಿ ಖಂಡಿಸಿದರು.
ಮುಖ್ಯವಾಗಿ ಭೂ ಸುಧಾರಣಾ ಕಾಯ್ದೆ ಮತ್ತು ಎಪಿಎಂಸಿ ಕಾಯ್ದೆ ಮತ್ತು ಕಾರ್ಮಿಕ ಕಾಯ್ದೆಗಳನ್ನು ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ಮಾಡಿ ಬಹುರಾಷ್ಟ್ರೀಯ ಕಂಪನಿಗಳಿಗೆ ರತ್ನಗಂಬಳಿ ಹಾಸಿ ಸರ್ಕಾರಗಳು ಸ್ವಾಗತಿಸಲು ಹೊರಟಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರಗಳ ಈ ನಿಲುವನ್ನು ಖಂಡಿಸಿ ರೈತರು ನಡೆಸುವ ಹೋರಾಟವನ್ನು ಬೆಂಬಲಿಸಿ, ಸುಮಾರು 19 ಕನ್ನಡ ಪರ ಸಂಘಟನೆಗಳು ಸಂಯುಕ್ತವಾಗಿ ಅಂದು ಬೆಳಗ್ಗೆ 11.30ಕ್ಕೆ ನಗರದ ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತದ ಮಾರ್ಗವಾಗಿ ಬೃಹತ್ ಮತ್ತು ವಿನೂತನ ಪ್ರತಿಭಟನಾ ಮೆರವಣಿಗೆ ಮುಖಾಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದೆಂದರು.
ಕರ್ನಾಟಕ ಬಂದ್ ಗೆ ಒಕ್ಕೂಟದಿಂದ ಬೆಂಬಲ ವಿಲ್ಲ. ಹೋರಾಟಕ್ಕಷ್ಟೇ. ಸರ್ಕಾರದ ಲಾಕ್‌ಡೌನ್ ಪರಿಣಾಮ ಜನ ಜೀವನ ತತ್ತರಿಸಿದ್ದು, ಹೊಟ್ಟೆ ತುಂಬಿಸಿಕೊಳ್ಳಲು ಅನ್ನಕ್ಕೂ ಪರಿತಪಿಸುವ ಪರಿಸ್ಥಿತಿ ಪ್ರಸ್ತುತ ಎದುರಾಗಿದೆ. ಒಂದು ರೂ. ದುಡಿಮೆಗೂ ಸಾಹಸಪಡುವಂತಾಗಿದೆ. ಇಂತಹ ಸಂಕಷ್ಟದ ಸ್ಥಿತಿಯಲ್ಲಿ ಕರ್ನಾಟಕ ಬಂದ್ ಮಾಡಿ ಜನರ ಬದುಕನ್ನು ಬಲವಂತವಾಗಿ ಕುಗ್ಗಿಸುವ ಕೆಲಸ ಮಾಡಬಾರದು ಎಂದರು.
ಒಕ್ಕೂಟದ ಕಾರ್ಯಾಧ್ಯಕ್ಷ ವಿ. ಅವಿನಾಶ್ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಎನ್.ಹೆಚ್. ಹಾಲೇಶ್, ಪ್ರಧಾನ ಕಾರ್ಯದರ್ಶಿ ಕೆ.ಎನ್. ವೆಂಕಟೇಶ್, ಎಂ.ಎ. ಸಾಧಿಕ್, ಎಸ್. ರಾಜು, ಅರವಿಂದ್ ಆಚಾರ್ ಸೇರಿದಂತೆ ಇತರರಿದ್ದರು.
ಆರ್ಥಿಕ ನೆರವು-ಆಹಾರ ಧಾನ್ಯಗಳ ಕಿಟ್ ಗಾಗಿ ಆಗ್ರಹ
ದಾವಣಗೆರೆ, ಸೆ.23- ಆರ್ಥಿಕ ನೆರವು ಮತ್ತು ಆಹಾರ ಧಾನ್ಯಗಳ ಕಿಟ್ ನೀಡಬೇಕೆಂದು ಒತ್ತಾಯಿಸಿ ನಗರದಲ್ಲಿ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ಇಂದಿನಿಂದ 2 ದಿನಗಳ ಮುಷ್ಕರ ಆರಂಭಿಸಿದ್ದಾರೆ.
ಎಪಿಎಂಸಿ ಬಳಿ ಪ್ರತಿಭಟನಾ ಮೆರವಣಿಗೆ ನಡೆಸಿ ಮುಷ್ಕರ ಹೂಡಿರುವ ಕಾರ್ಮಿಕರು, ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾದ, ಹಸಿವಿನ ದವಡೆಗೆ ದೂಡಲ್ಪಟ್ಟ ಶ್ರಮ ಜೀವಿಗಳಾದ ಎಪಿಎಂಸಿ, ಗ್ರಾಮೀಣ ಬಜಾರ, ಮಿಲ್ ಗೋಡೌನ್, ವೇರ್ ಹೌಸ್, ಗೂಡ್ ಶೆಡ್, ಟ್ರಾನ್ಸ್ ಪೋರ್ಟ್, ಬಂದರು ಮುಂತಾದ ವಿಭಾಗದ ಹಮಾಲಿ ಕಾರ್ಮಿಕರಿಗೆ ಆರ್ಥಿಕ ನೆರವು ಮತ್ತು ಆಹಾರ ಧಾನ್ಯಗಳ ಕಿಟ್ ನೀಡಬೇಕು ಎಂದು ಬಿಗಿಪಟ್ಟು ಹಿಡಿದಿದ್ದಾರೆ.
ಮುಖ್ಯಮಂತ್ರಿಗಳು ಘೋಷಿಸಿದ ವಿಶೇಷ ಪರಿಹಾರ ಪ್ಯಾಕೇಜ್ ಸಂಕಷ್ಟಕ್ಕೀಡಾದ ಬಹುತೇಕ ಅಸಂಘಟಿತ ಕಾರ್ಮಿಕರನ್ನು ಒಳಗೊಂಡಿಲ್ಲ. ರಾಜ್ಯದಲ್ಲಿರುವ ಎಪಿಎಂಸಿ, ಗ್ರಾಮೀಣ ಬಜಾರ್, ಮಿಲ್ ಗೋಡೌನ್, ವೇರ್ ಹೌಸ್, ಗೂಡ್ ಶೆಡ್, ಟ್ರಾನ್ಸ್‌ಪೋರ್ಟ್, ಬಂದರು ಮುಂತಾದ ಹಮಾಲಿ ಕಾರ್ಮಿಕರು 4 ಲಕ್ಷದಷ್ಟಿದ್ದು, ಸರಿಯಾದ ಸಾಮಾಜಿಕ ಭದ್ರತೆಯೂ ಇಲ್ಲ ಎಂದು ಪ್ರತಿಭಟನಾಕಾರರು ಅಳಲಿಟ್ಟರು.
ಜಿಲ್ಲಾ ಸಂಚಾಲಕ ಕೆ.ಹೆಚ್. ಆನಂದರಾಜು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.