ದಾವಣಗೆರೆ, ಸೆ.21- ಕಿಡ್ನಿ ಕಲ್ಲಿನ ತೊಂದರೆ ಇರುವವರಿಗೆ (6 ಎಂಎಂ ನಿಂದ 1.5 ಎಂಎಂ ಗಾತ್ರದ ವರೆಗೆ) ಶೇ. 50 ರಿಯಾಯಿತಿ ದರದಲ್ಲಿ ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ, ದಾಖಲಾತಿ (ಒಳರೋಗಿ) ಇಲ್ಲದೆ, ಅರಿವಳಿಕೆಯ ಅವಶ್ಯಕತೆ ಇಲ್ಲದೆ, ಕಲ್ಲನ್ನು ಪುಡಿ ಮಾಡುವ ಎಕ್ಸ್ಟ್ರಾ ಕಾರ್ಪೊರಲ್ ಷಾಕ್ ವೇವ್ ಲಿಥೋಥ್ರಿಪೇ ಜರ್ಮನ್ ದೇಶದಿಂದ ಆಮದುಗೊಂಡಿರುವ ಅತ್ಯಾಧುನಿಕ ತಂತ್ರಜ್ಞಾನ ಉಳ್ಳ ಡಾರ್ನಿಯರ್ ಡೆಲ್ಟಾ 2 ಮೆಷಿನ್ ಚಿಕಿತ್ಸೆ ನೀಡಲಾಗುವುದು.
ನಗರದ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಛೇರ್ಮನ್ ಹಾಗೂ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ 53ನೇ ಹುಟ್ಟು ಹಬ್ಬದ ಪ್ರಯುಕ್ತ ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಯುರಾಲಜಿ ವಿಭಾಗದಿಂದ ಇಂದಿನಿಂದ ಬರುವ ಅಕ್ಟೋಬರ್ 12 ರವರೆಗೆ ಈ ಚಿಕಿತ್ಸೆ ನೀಡಲಾಗುತ್ತದೆ ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.
ಎಸ್.ಎಸ್. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ಯುರಾಲಜಿ ವಿಭಾಗದ ಒ.ಪಿ.ಡಿ ವಿಭಾಗದಲ್ಲಿ ಸೋಮವಾರದಿಂದ ಬುಧವಾರ ಬೆಳಿಗ್ಗೆ 10 ರಿಂದ 1 ರವರೆಗೆ ಹಾಗೂ ಗುರುವಾರದಿಂದ ಶನಿವಾರ ದವರೆಗೆ ಮಧ್ಯಾಹ್ನ 2.30 ರಿಂದ 4.30 ರವರೆಗೆ ಚಿಕಿತ್ಸೆ ನೀಡಲಾಗುವುದು. ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು.