ಜಗಳೂರು, ಸೆ.16- ಹಿಂದುಳಿದ ಚಲುವಾದಿ ಸಮಾಜದವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪ್ರಗತಿಗಾಗಿ ಸಂಘವನ್ನು ಶೀಘ್ರದಲ್ಲೇ ಎಲ್ಲಾ ಸಮಾನ ಮನಸ್ಕರ ಜೊತೆಗೂಡಿ ಸ್ಥಾಪಿಸಲಾಗುವುದು ಎಂದು ಸಮಾಜದ ಮುಖಂಡ ಹಾಗೂ ಪತ್ರಕರ್ತ ಸಿ.ಬಸವರಾಜ್ ತಿಳಿಸಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಚಲುವಾದಿ ಹಾಸ್ಟೆಲ್ ಸ್ಥಾಪನೆ ಸೇರಿದಂತೆ ಸಮಾಜದ ವಿವಿಧ ಸೌಲಭ್ಯಗಳನ್ನು ನೀಡುವಂತೆ ಶಾಸಕ ಎಸ್.ವಿ. ರಾಮಚಂದ್ರ, ಸಂಸದರು ಸೇರಿದಂತೆ ಚುನಾಯಿತ ಪ್ರತಿನಿಧಿಗಳಲ್ಲಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಚಲುವಾದಿ ಸಮಾಜದ ಸಂಚಾಲನ ಸಮಿತಿ ಸಂಚಾಲಕ ಹೆಚ್. ಕರಿಬಸಪ್ಪ ಮಾತನಾಡಿ, ಕ್ಷೇತ್ರದಲ್ಲಿ 10 ಸಾವಿರ ಚಲುವಾದಿ ಸಮಾಜದವರು ಇದ್ದರೂ ಸಹ ವಸತಿ, ನಿವೇಶನ, ಸಾಲ ಸೌಲಭ್ಯ ಸೇರಿದಂತೆ ಸರ್ಕಾರಿ ಸೌಲಭ್ಯಗಳಿಂದ ವಂಚಿತ ರಾಗಿದ್ದಾರೆ. ಇದನ್ನು ಮನಗಂಡು ಚಲುವಾದಿ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಪ್ರಜ್ಞಾವಂತ ವಿದ್ಯಾವಂತ ಯುವಕರು, ಸಮಾನ ಮನಸ್ಕರು ಸೇರಿ ಸಂಘ ರಚಿಸಲು ತೀರ್ಮಾನಿಸಿದ್ದೇವೆ ಎಂದರು.
ಸಮಿತಿ ಸದಸ್ಯ ಮಾದಿಹಳ್ಳಿ ಮಂಜುನಾಥ್ ಮಾತನಾಡಿದರು. ಚಲುವಾದಿ ಸಮಾಜದ ಮುಖಂಡರು ಗಳಾದ ಶ್ರೀನಿವಾಸ್, ಬಸವರಾಜ್, ಸುನೀಲ್, ಹನುಮಂತಪ್ಪ, ಕಿರಣ್, ಬಸವಲಿಂಗಪ್ಪ, ಆನಂದಪ್ಪ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.