ದ್ವಿಚಕ್ರ ಸವಾರಿಗೆ ಹೆಲ್ಮೆಟ್ ಕಡ್ಡಾಯ

ಬಳ್ಳಾರಿ ಎಸ್ಪಿ ಸೊದುಲು ಅಡಾವತ್ 

ಹರಪನಹಳ್ಳಿ, ಸೆ.16- ಬಳ್ಳಾರಿ ಜಿಲ್ಲೆ ಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದ್ದು, ವರ್ಷದಲ್ಲಿ 400 ಸಾವುಗಳು ಅಪಘಾತದಿಂದ ಆಗಿವೆ ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೊದುಲು ಅಡಾವತ್ ತಿಳಿಸಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬೈಕ್ ಸವಾರರು  ಹೆಲ್ಮೆಟ್ ಧರಿಸುವುದಿಲ್ಲ. ಅದರಲ್ಲೂ ಯುವ ಜನತೆ ಹೆಲ್ಮೆಟ್ ಧರಿಸದೇ ಅಪಘಾತಕ್ಕೆ ಈಡಾಗುತ್ತಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಹೆಲ್ಮೆಟ್ ಕಡ್ಡಾಯಗೊಳಿಸಲಾಗುವುದು ಎಂದರು.

ಹರಪನಹಳ್ಳಿ ಹಾಗೂ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಗಳು ಶೀಘ್ರವೇ ಮೇಲ್ದರ್ಜೆಗೆ ಏರಲಿವೆ.  ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳ ಸಂಖ್ಯೆ ಹೆಚ್ಚಳವಾಗಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕಾರಿಯಾಗಲಿದೆ  ಎಂದರು. ನೂತನ ಕಟ್ಟಡ ನಿರ್ಮಾಣಕ್ಕೆ  ಸರ್ಕಾರಕ್ಕೆ ಪ್ರಸ್ತಾವನೆ ಹೋಗಿದ್ದು, ಶಿಥಿಲ ಗೊಂಡ ಪೊಲೀಸ್ ಕ್ವಾಟರ್ಸ್‌ಗಳ ಕುರಿತು ಗಮನ ಹರಿಸಲಾಗುವುದು ಎಂದರು. 

ಆರಕ್ಷಕರು – ಜನರ ಮಧ್ಯೆ ಅಂತರ ಜಾಸ್ತಿಯಾಗುತ್ತಿದೆ ಎಂಬ ಆಕ್ರೋಶವಿದೆ. ಈ ಅಂತರ ಕಡಿಮೆ ಮಾಡಲು ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಸಾಮಾಜಿಕ ಜಾಲ ತಾಣದಲ್ಲಿ ನೆಟ್‌ವರ್ಕ್‌ ಕಲ್ಪಿಸಿಕೊಂಡು ಜನಸ್ನೇಹಿಯಾಗಿ ಪೊಲೀಸರು ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಹಾಗೂ ಗಾಂಜಾ ಸೊಪ್ಪು ಬೆಳೆಯುವುದನ್ನು ಪತ್ತೆ ಹಚ್ಚಲಾಗುತ್ತಿದೆ. ಈಗಾಗಲೇ ಗಾಂಜಾಗೆ ಸಂಬಂಧ ಪಟ್ಟಂತೆ 7 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ ಎಂದು ಹೇಳಿದರು.

ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ, ಪಿಎಸ್‍ಐ ಸಿ. ಪ್ರಕಾಶ್, ಪೇದೆಗಳಾದ ಕೊಟ್ರೇಶ್, ಜಾತಪ್ಪ ಇನ್ನಿತರರಿದ್ದರು.

error: Content is protected !!