ಹರಿಹರ : ಎಸ್ಸಿ, ಎಸ್ಟಿ ಜಾಗೃತಿ ಸಮಿತಿಯ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಎಸ್. ರಾಮಪ್ಪ
ಹರಿಹರ, ಸೆ.15- ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಇರುವ ಗೋಮಾಳದ ಜಮೀನುಗಳನ್ನು ಬಡ ಕುಟುಂಬಗಳ ವಸತಿಗಾಗಿ ಮತ್ತು ಅಂತ್ಯಸಂಸ್ಕಾರಕ್ಕೆ ಉಪಯೋಗಿಸಲು ವ್ಯವಸ್ಥೆ ಮಾಡುವುದಕ್ಕೆ ಮುಂದಾಗಿ ಎಂದು ಶಾಸಕ ಎಸ್. ರಾಮಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ತಾಪಂ ಕಚೇರಿಯ ಸಭಾಂಗಣ ದಲ್ಲಿ ನಿನ್ನೆ ಏರ್ಪಾಡಾಗಿದ್ದ ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಾಂಗದ ಹಿತರಕ್ಷಣಾ ಜಾಗೃತ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರ ಕೇವಲ ಒಂದು ಗ್ರಾಮಕ್ಕೆ 20 ಮನೆಗಳಿಗೆ ಮಾತ್ರ ಅವಕಾಶ ಕಲ್ಪಿಸಿರುತ್ತದೆ. ಇದರಿಂದಾಗಿ ಗ್ರಾಮದಲ್ಲಿ ಸರಿ ಸುಮಾರು 500 ರಿಂದ 600 ಕುಟುಂಬದವರಿಗೆ ಮನೆಯ ವ್ಯವಸ್ಥೆ ಇಲ್ಲದೆ ಇರುತ್ತಾರೆ. ಇಂತಹ ಸಂದರ್ಭದಲ್ಲಿ ಸರ್ಕಾರ ನೀಡುವ 20 ಮನೆಗಳಿಂದ ಗ್ರಾಮದ ಜನರಿಗೆ ತೃಪ್ತಿ ಮಾಡುವುದು ಕಷ್ಟವಾಗುತ್ತದೆ. ಹಾಗಾಗಿ ಸರ್ಕಾರದ ಗೋಮಾಳದ ಜಮೀನಿನಲ್ಲಿ ವಸತಿ ರಹಿತ ಬಡವರಿಗೆ ಮನೆಯನ್ನು ಕಟ್ಟಿಕೊಳ್ಳಲು ಅವಕಾಶ ನೀಡಬೇಕು ಎಂದು ಹೇಳಿದರು.
ನಗರದ ಆಶ್ರಯ ಬಡಾವಣೆಯ ನಿವಾಸಿಗಳ ಮನೆಯ ನೋಂದಣಿ ಮಾಡಿಸಿ, ಹಕ್ಕು ಪತ್ರಗಳನ್ನು ವಿತರಿಸಬೇಕು. ನಗರದಲ್ಲಿ ಸೂಕ್ತವಾದ ಸ್ಥಳವನ್ನು ನೋಡಿ, ಎಸ್.ಸಿ. ಜನಾಂಗದ ಬಹುದಿನಗಳ ಬೇಡಿಕೆಯಾದ ಅಂಬೇಡ್ಕರ್ ಭವನ ಕಟ್ಟುವುದಕ್ಕೆ ಸಿದ್ಧನಿರುವುದಾಗಿ ತಿಳಿಸಿದರು.
ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಹರಿಹರ ತಾಲ್ಲೂಕಿನಲ್ಲಿ ಒಟ್ಟು 86 ಹಳ್ಳಿಗಳಲ್ಲಿ, 66 ಕ್ಕೆ ಅಂತ್ಯಸಂಸ್ಕಾರ ನೆರವೇರಿಸಲು ಜಮೀನಿನ ವ್ಯವಸ್ಥೆ ಮಾಡಲಾಗಿದೆ. ಉಳಿದ 12 ಗ್ರಾಮದಲ್ಲಿ ಜಮೀನು ಲಭ್ಯ ಇರುವುದಿಲ್ಲ. ಆ ಗ್ರಾಮಗಳಲ್ಲೂ ಸಹ ವ್ಯವಸ್ಥೆ ಮಾಡುವುದಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಮ್ಮ ತಾಲ್ಲೂಕಿನಲ್ಲಿ ನೀರಾವರಿ ಪ್ರದೇಶ ಹೆಚ್ಚಾಗಿ ಇರುವುದರಿಂದ ಜಮೀನನ್ನು ನೀಡುವುದಕ್ಕೆ ಯಾರೂ ಮುಂದೆ ಬರುತ್ತಿಲ್ಲ. ಯಾವುದೇ ವ್ಯಕ್ತಿಗಳು ಕೊಡುವುದಕ್ಕೆ ಮುಂದೆ ಬಂದರೆ ಜಮೀನನ್ನು ಖರೀದಿಸಿ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪರಮೇಶ್ವರಪ್ಪ ಮಾತನಾಡಿದರು. ಸಿಪಿಐ ಎಸ್. ಶಿವಪ್ರಸಾದ್ ಮಾತನಾಡಿ, ಖಾಸಗಿ ಶಾಲೆಯ ಮಕ್ಕಳನ್ನು ಕರೆದುಕೊಂಡು ಹೋಗುವಂತಹ ಆಟೋ ಮತ್ತು ವ್ಯಾನ್ ನವರು ನಿಗದಿತ ಮಕ್ಕಳನ್ನು ಕರೆದುಕೊಂಡು ಹೋಗುವುದಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಆಶ್ರಯ ಬಡಾವಣೆಯ ಹನುಮಂತಪ್ಪ ಮಾತನಾಡಿ, ಆಶ್ರಯ ಬಡಾವಣೆಯ ನಿವಾಸಿಗಳಿಗೆ ಹಕ್ಕು ಪತ್ರ ನೀಡುವುದಕ್ಕೆ ಅಧಿಕಾರಿಗಳು 60 ರಿಂದ 70 ಸಾವಿರ ಕೇಳುತ್ತಾರೆ. ಹಾಗಾಗಿ ಇದರ ಬಗ್ಗೆ ಶಾಸಕರು ಗಮನ ಹರಿಸಬೇಕು ಎಂದರು.
ಜಿ.ವಿ. ವೀರೇಶ್, ಸಂತೋಷ ನೋಟದರ, ಸುಧಾಕರ್, ಮಂಜುನಾಥ ರಾಜನಹಳ್ಳಿ, ಪಿ.ಜೆ. ಮಹಾಂತೇಶ್, ಕೊಟ್ರೇಶ್, ಮಲ್ಲೇಶಪ್ಪ, ಹನುಮಂತಪ್ಪ ಎಲ್.ಬಿ. ನಿರಂಜನಮೂರ್ತಿ, ಪ್ರಭು, ವಿಶ್ವನಾಥ್ ಮೈಲಾಳ ಮಾತನಾಡಿದರು.
ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ಶ್ರೀದೇವಿ ಮಂಜುನಾಥ್, ಕೃಷಿ ಅಧಿಕಾರಿ ವಿ.ಪಿ. ಗೋವರ್ಧನ್, ವಿಜಯ ಮಹಾಂತೇಶ್, ಲಿಂಗರಾಜ್, ವೀಣಾ, ರೇಖಾ ಮತ್ತು ಎಸ್.ಸಿ ಮತ್ತು ಎಸ್. ಟಿ ಸಮುದಾಯದ ಮುಖಂಡರು ಹಾಜರಿದ್ದರು.