ಚನ್ನಗಿರಿ, ಸೆ. 11 – ಚಿತ್ರದುರ್ಗ ಶ್ರೀ ಮುರುಘರಾಜೇಂದ್ರ ಬೃಹನ್ಮಠದ ಆಡಳಿತಕ್ಕೆ ಒಳಪಟ್ಟ ಶಾಖಾಮಠವಾದ ಚನ್ನಗಿರಿಯ ಶ್ರೀ ಹಾಲಸ್ವಾಮಿ ವಿರಕ್ತಮಠದಲ್ಲಿ ಇಂದು ಡಾ. ಶಿವಮೂರ್ತಿ ಮುರುಘಾ ಶರಣರು ನೂತನ ಶ್ರೀಗಳಿಗೆ ಬಸವ ತತ್ವೋಪದೇಶ ಮತ್ತು ಸಮಾಜ ಸೇವಾ ದೀಕ್ಷೆ (ಚರಪಟ್ಟಾಧಿಕಾರ) ನೆರವೇರಿಸಿದರು.
ನಂತರ ಭಕ್ತರನ್ನುದ್ದೇಶಿಸಿ ಮಾತನಾಡಿದ ಶರಣರು, ಹಾಲಸ್ವಾಮಿ ವಿರಕ್ತ ಮಠದ ಲಿಂಗೈಕ್ಯ ಶ್ರೀ ಜಯದೇವ ಸ್ವಾಮಿಗಳ ಆಶಯದಂತೆ ಶ್ರೀ ಚಂದ್ರಮೋಹನ ದೇವರು ಅವರನ್ನು ಚನ್ನಗಿರಿ ವಿರಕ್ತಮಠಕ್ಕೆ ಡಾ. ಶ್ರೀ ಬಸವ ಜಯಚಂದ್ರ ಸ್ವಾಮಿಗಳು ಎಂಬ ನೂತನ ನಾಮಾಂಕಿತದೊಂದಿಗೆ ನೇಮಕ ಮಾಡಿ ಸಮಾಜ ಸೇವಾದೀಕ್ಷೆ (ಚರಪಟ್ಟಾಧಿಕಾರ)ಯನ್ನು ಅನುಗ್ರಹಿಸ ಲಾಗಿದೆ ಎಂದು ತಿಳಿಸಿದರು.
ಭಾರತೀಯ ಪರಂಪರೆಯಲ್ಲಿ ಅವಿಚ್ಛಿನ್ನವಾದ ಪರಂಪರೆ ಎಂದರೆ ಮಠ ಪರಂಪರೆ. ಇದು ತುಂಬಾ ಆಪ್ತವಾದ ಪರಂಪರೆಯಾಗಿದ್ದು, ಜೀವನವನ್ನು ಹದಗೊಳಿಸುವಂಥದ್ದು. ಜನಮುಖಿ ಕಾರ್ಯಗಳೇ ಒಂದು ಮಠ ಮತ್ತು ಪೀಠದ ನಿಜವಾದ ಅಸ್ತಿತ್ವ. ಅದುವೇ ಇತಿಹಾಸ. ಅಂತೆಯೇ ಜಂಗಮ ಸದಾ ಚಲನ ಶೀಲವಾಗಿರಬೇಕು. ಚಲನಶೀಲತೆಯೇ ಕ್ರಿಯಾಶೀಲತೆ. ಕ್ರಿಯಾಶೀಲತೆಯೇ ಜಂಗಮತ್ವ. ಕ್ರಿಯಾಶೀಲತೆಗೆ ಬದುಕು ಸಮರ್ಪಿಸುವವನೇ ನಿಜವಾದ ಸಾಧಕನಾಗಲು ಸಾಧ್ಯ ಎಂದು ಹೇಳಿದರು.
ಮಠ ಮತ್ತು ಘಟ ಇವೆರಡು ಒಂದಾಗಿ ಘಟಕವಾಗಬೇಕು. ಸ್ವಾಮಿಗಳು ಸಮಾಜದ ಮಕ್ಕಳು. ಅವರು ಸಮಾಜದ ಸ್ವಾಸ್ತ್ಯಕ್ಕಾಗಿ ಬದುಕುತ್ತಾರೆ. ಸಮಾಜವೂ ಸಹ ಮಠದ ಜವಾಬ್ದಾರಿ ಹೊತ್ತುಕೊಳ್ಳಬೇಕು. ಸ್ವಾಮಿಗಳೂ ಸಹ ಪೂರ್ಣವಾದ ಮಠದ ಜವಾಬ್ದಾರಿ ತೆಗೆದುಕೊಳ್ಳಬೇಕು. ಗುರುಸಾಕ್ಷಿ, ಧರ್ಮಸಾಕ್ಷಿ, ದೈವಸಾಕ್ಷಿ ಸ್ವಾಮಿಗಳಿಗೆ ಬೇಕು. ಅಂತರ್ಮುಖಿ ಸಾಧನೆ ಮಾಡಬೇಕು. ಇದರಲ್ಲಿ ಪರಮಾನಂದ ಸಿಗುತ್ತದೆ. ಬಸವಣ್ಣ ಎಂದರೆ ಸಮೂಹ, ಸಮಾಜ. ಎಲ್ಲಾ ದೇಶಗಳ ಪಾರ್ಲಿಮೆಂಟ್ಗೆ ತಾಯಿ ಯಾವುದೆಂದರೆ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ. ನಮ್ಮೆಲ್ಲರ ಆದರ್ಶ ಎಂದರೆ ಬಸವಣ್ಣನವರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ಕೊಳದ ಮಠದ ಡಾ. ಶಾಂತವೀರ ಮಹಾಸ್ವಾಮೀಜಿ, ಹೆಬ್ಬಾಳು ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ರಾವಂದೂರು ಮುರುಘಾ ಮಠದ ಶ್ರೀ ಮೋಕ್ಷಪತಿ ಸ್ವಾಮೀಜಿ, ತಾವರೆಕೆರೆ ಶಿಲಾಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಚನ್ನಗಿರಿ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತ ಮಠದ ಡಾ. ಶ್ರೀ ಗುರುಬಸವ ಸ್ವಾಮೀಜಿ, ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ, ದಾವಣಗೆರೆ ವಿರಕ್ತ ಮಠದ ಶ್ರೀ ಬಸವ ಪ್ರಭು ಸ್ವಾಮೀಜಿ, ಹಾವೇರಿ ಹೊಸಮಠದ ಶ್ರೀ ಬಸವ ಶಾಂತಲಿಂಗ ಸ್ವಾಮೀಜಿ, ಬ್ಯಾಡಗಿ ಮುಪ್ಪಿನಸ್ವಾಮಿ ವಿರಕ್ತ ಮಠದ ಶ್ರೀ ಚನ್ನಮಲ್ಲಿಕಾರ್ಜುನ ಸ್ವಾಮೀಜಿ, ತಿಳವಳ್ಳಿ ಕಲ್ಮಠದ ಶ್ರೀ ಬಸವ ನಿರಂಜನ ಸ್ವಾಮೀಜಿ, ನಿಪ್ಪಾಣಿ ಮುರುಘೇಂದ್ರ ಮಠದ ಶ್ರೀ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ನಾಗಗೊಂಡನಹಳ್ಳಿ ಚೆಲುಮೇರುದ್ರ ಸ್ವಾಮಿ ಮಠದ ಶ್ರೀ ಬಸವ ಕಿರಣ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲಳ್ಳಿಮಠದ ಶ್ರೀ ರುದ್ರಮುನಿಗಳು ಸ್ವಾಮೀಜಿ, ಗುಬ್ಬಿಯ ನಾಗರಾಜ ದೇವರು, ಧಾರವಾಡದ ಶಶಾಂಕ ದೇವರು, ಸದಾಶಿವಪೇಟೆ ಶ್ರೀಗಳು ಮತ್ತಿತರರು ಭಾಗವಹಿಸಿದ್ದರು.