ದಾವಣಗೆರೆ, ಸೆ.11- ಚಿತ್ರದುರ್ಗ ಜಿಲ್ಲೆಯ ತುರುವನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಶುಕ್ರವಾರ ಅಧಿಕೃತವಾಗಿ ದಾವಣಗೆರೆ ವಿಶ್ವವಿದ್ಯಾನಿಲಯದ ಅಧೀನ ಕಾಲೇಜಾಗಿ ಒಪ್ಪಿಸಲಾಯಿತು.
ಕಾಲೇಜು ಆವರಣದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ವೀರಭದ್ರಯ್ಯ ಅವರ ಸಮ್ಮುಖದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ. ಬಸವರಾಜ ಬಣಕಾರ ಅವರಿಗೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ದಾಖಲಾತಿಗಳನ್ನು ಹಸ್ತಾಂತರಿಸಿದರು.
ನಂತರ ಮಾತನಾಡಿದ ಕುಲಸಚಿವ ಪ್ರೊ. ಬಣಕಾರ ಮಾತನಾಡಿ, ಇದೊಂದು ಅಪೂರ್ವ ಕ್ಷಣ. ಸರ್ಕಾರದ ಕಾಲೇಜನ್ನು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಪ್ಪಿಸಿ, ಅದರ ಸಮಗ್ರ ಅಭಿವೃದ್ಧಿಯ ಜವಾಬ್ದಾರಿ ಹೊರಿಸಲಾಗಿದೆ. ನಿರೀಕ್ಷೆಗೂ ಮೀರಿ ಕಾಲೇಜನ್ನು ಅಭಿವೃದ್ಧಿಪಡಿಸಿ, ಶೈಕ್ಷಣಿಕವಾಗಿ ಈ ಭಾಗದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲು ಬದ್ಧವಾಗಿದೆ. ಯಾವುದೇ ರೀತಿಯ ತೊಂದರೆ ಆಗದಂತೆ ನಿರ್ವಹಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಭಾಗದ ಬಡ, ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಆಶಯಕ್ಕೆ, ಸಂಕಲ್ಪಕ್ಕೆ ಕಾಲೇಜು ನೆರವಾಗಿತ್ತು. ಆದರೆ ಅನಿವಾರ್ಯ ಕಾರಣದಿಂದ ಮುಚ್ಚುವ ಹಂತಕ್ಕೆ ಬಂದಾಗ ಸ್ಥಳೀಯರ ಹೋರಾಟಕ್ಕೆ ಸ್ಪಂದಿಸಿದ ಸರ್ಕಾರ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಡಿ ಸಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವರ ಉನ್ನತ ಭವಿಷ್ಯಕ್ಕೆ ಮಾರ್ಗದರ್ಶಿಯಾಗುವ ರೀತಿಯಲ್ಲಿ ಬೆಳೆಸಲಾಗುವುದು. ಎಲ್ಲಾ ಮೂಲಸೌಲಭ್ಯಗಳನ್ನು ಒದಗಿಸಿ, ವಿದ್ಯಾರ್ಥಿಗಳ ಮತ್ತು ಪೋಷಕರ ಹಿತ ಕಾಪಾಡಲಾಗುವುದು. ಸರ್ಕಾರ ವಿಶ್ವವಿದ್ಯಾನಿಲಯದ ಮೇಲಿಟ್ಟಿರುವ ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯ ನಿರ್ವಹಿಸಲಾಗುವುದು ಎಂದು ತಿಳಿಸಿದರು.
ಜಂಟಿ ನಿರ್ದೇಶಕ ವೀರಭದ್ರಯ್ಯ ಮಾತನಾಡಿದರು. ಕಾಲೇಜಿನ ವಿಶೇಷಾಧಿಕಾರಿ ಡಾ. ಬಸವರಾಜ್, ಕಾಲೇಜು ಜಮೀನಿನ
ದಾನಿ ಗಾರೆಮನೆ ಶಿವಣ್ಣರೆಡ್ಡಿ, ಮೌನೇಶ್, ದಾವಣಗೆರೆ ದೃಶ್ಯಕಲಾ ಕಾಲೇಜಿನ ಪ್ರಾಚಾರ್ಯ ಡಾ. ರವೀಂದ್ರ ಕಮ್ಮಾರ್, ಸಹಾಯಕ
ಪ್ರಾಧ್ಯಾಪಕ ಡಾ. ಸತೀಶ್‌ಕುಮಾರ್ ಪಿ. ವಲ್ಲೇಪುರೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.