ಡಿಸಿಗೆ ಬಿಜೆಪಿ ಯುವ ಮೋರ್ಚಾ ಮನವಿ
ದಾವಣಗೆರೆ, ಸೆ.11- ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾದ ವರು ಯಾರೇ ಆಗಿದ್ದರೂ ಯಾವುದೇ ಒತ್ತಡ, ಪ್ರಭಾವಗಳಿಗೆ ಮಣಿಯದೇ ನಿಷ್ಪಕ್ಷಪಾತ ತನಿಖೆ ನಡೆಸಿ ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದಲ್ಲಿಂದು ಜಿಲ್ಲಾ ಬಿಜೆಪಿಯ ಯುವ ಮೋರ್ಚಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರವು ಡ್ರಗ್ಸ್ ದಂಧೆಯ ವಿರುದ್ಧ ತೆಗೆದುಕೊಂಡಿರುವ ಕಠಿಣ ಕ್ರಮಗಳನ್ನು ಪ್ರಶಂಸಿಸಿದ ಮೋರ್ಚಾದ ಕಾರ್ಯಕರ್ತರು, ಇದೇ ರೀತಿ ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರವು ಹಾಗೂ ಪೊಲೀಸ್ ಇಲಾಖೆ ಡ್ರಗ್ಸ್ ಮಾಫಿಯಾದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಂಡು ಡ್ರಗ್ಸ್ ದಂಧೆಯನ್ನು ರಾಜ್ಯದಿಂದಲೇ ಮಟ್ಟ ಹಾಕಲು ಜಿಲ್ಲಾಡಳಿತ ಮುಖಾಂತರ ಸರ್ಕಾರಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷ ಆರ್.ಎಲ್. ಶಿವಪ್ರಕಾಶ್, ಗೌತಮ್ ಜೈನ್, ಜಿಲ್ಲಾ ಉಪಾಧ್ಯಕ್ಷ ಕೆ.ವಿ. ಗುರುರಾಜ್, ಶ್ರೀಕಾಂತ್ ನೀಲಗುಂದ, ಉತ್ತರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ವೆರ್ಣೇಕರ್, ದಕ್ಷಿಣ ಯುವ ಮೋರ್ಚಾ ಉಪಾಧ್ಯಕ್ಷ ಅಭಿಷೇಕ್ ಸೇರಿದಂತೆ ಇತರರು ಇದ್ದರು.