ಕಾನೂನಿನ ನೆಪದಲ್ಲಿ ಶ್ರೀಸಾಮಾನ್ಯರ ಮೇಲೆ ದೌರ್ಜನ್ಯ : ಕಾಂಗ್ರೆಸ್ ಆರೋಪ

ದಾವಣಗೆರೆ, ಸೆ.10- ಐಎಸ್ಐ ಮಾರ್ಕಿನ ಪೂರ್ಣ ಹೆಲ್ಮೆಟ್ ಕಡ್ಡಾಯ ಮಾಡಿ ರುವ ರಾಜ್ಯ ಸರ್ಕಾರ ಹೆಲ್ಮೆಟ್ ಕಂಪನಿ ಗಳಿಂದ ಹಣ ಪಡೆದು ಸಾರ್ವಜನಿಕರಿಂದ ಕೊರೊನಾದಂತಹ ಕಷ್ಟದ ಸಮಯದಲ್ಲಿ ಸುಲಿಗೆ ಮಾಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ ಆರೋಪಿಸಿದರು.

ಸರ್ಕಾರಕ್ಕೆ ಹಾಗೂ ಪೊಲೀಸರಿಗೆ ಆದಾಯ ಗಳಿಸುವ ಮರಳು, ಬೆಟ್ಟಿಂಗ್ ಮುಂತಾದ ಬೇರೆ ಮೂಲಗಳಿದ್ದು, ಅವರಿಂದ ದಂಡ ವಸೂಲಿ ಮಾಡಿ. ಆದರೆ, ಕಾನೂನು ನೆಪದಲ್ಲಿ ಬಡ ರೈತರು ಹಾಗೂ ಸಾಮಾನ್ಯ ಜನರಿಂದ ಸುಲಿಗೆ ಮಾಡುವುದನ್ನು ಬಿಟ್ಟು ಬಿಡಿ ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ನಗರ ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಮಾತನಾಡಿ, ಆಜಾದ್ ನಗರ, ಶಾಂತಿ ಟಾಕೀಸ್, ಅಶೋಕ ಟಾಕೀಸ್ ಹೀಗೆ ಹಳೆ ದಾವಣಗೆರೆಯಲ್ಲಿ ಗುಂಪು ಗುಂಪಾಗಿ ನಿಂತು ಪೊಲೀಸರು ದಂಡ ವಸೂಲಿ ಮಾಡುತ್ತಿರುವ ರೀತಿ ಅಮಾನವೀಯ. ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಇರದ ಕಾನೂನು ನಮ್ಮ ದಾವಣಗೆರೆಯಲ್ಲಿ ಇದೆಯೇ? ಎಂದು ಪ್ರಶ್ನಿಸಿದರು.

ಪಾಲಿಕೆಯ ಸದಸ್ಯ ಗಡಿ ಗುಡಾಳ್ ಮಂಜುನಾಥ್ ಮಾತನಾಡಿ, ಪೊಲೀಸ್ ಇಲಾಖೆಗೆ ಟಾರ್ಗೆಟ್ ನೀಡಿದ್ದು, ಒಬ್ಬೊಬ್ಬ ಎಎಸ್ಐ ಗಳಿಗೆ ಇಷ್ಟಿಷ್ಟು ಕೇಸ್ ಹಾಕಬೇಕೆಂದು ಹೇಳಲಾಗಿದೆ. ಹಾಗಾಗಿ ಪೊಲೀಸ್ ಸಿಬ್ಬಂದಿ ಟಾರ್ಗೆಟ್ ಮುಟ್ಟಲು ಮಾನವೀಯತೆ ಮರೆತು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ದೂರಿದರು.

ಪಾಲಿಕೆ ಸದಸ್ಯ ಕೆ. ಚಮನ್ ಸಾಬ್ ಮಾತನಾಡಿ ಚೌಕಿಪೇಟೆ, ಕಾಳಿಕಾದೇವಿ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿ ಅಂಗಡಿ ಮಾಲೀಕರುಗಳಿಂದ ಹಣ ಪಡೆದು ವಾಹನ ನಿಲ್ಲಿಸಲು ಅನುಕೂಲ ಮಾಡಿಕೊಡುತ್ತಿದ್ದಾರೆ. ಅಲ್ಲಿ ಇಲ್ಲದ ಕಾನೂನು ಸಾಮಾನ್ಯ ಜನರು ಹೆಲ್ಮೆಟ್ ಧರಿಸದೆ ಇದ್ದಾಗ ಬರುತ್ತದೆಯೇ. ಸರ್ಕಾರ ಕೋವಿಡ್-19ಕ್ಕೆ ಔಷಧಿ ಕಂಡು ಹಿಡಿಯುವವರೆಗೂ ಜನಸಾಮಾನ್ಯರಿಂದ ದಂಡ ವಸೂಲಿ ಮಾಡಬಾರದು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆ ಸದಸ್ಯ ದೇವರಮನೆ ಶಿವಕುಮಾರ್,  ಮುಖಂಡ ರಾದ ಶ್ರೀಕಾಂತ್ ಬಗರೆ, ಶಿವಾಜಿರಾವ್, ಕೆ.ಎಲ್. ಹರೀಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!