ಹರಪನಹಳ್ಳಿ, ಸೆ.9- ಗರ್ಭಗುಡಿ ಬಿಡ್ಜ್ ಕಂ ಬ್ಯಾರೇಜ್ ಸೇರಿದಂತೆ 50 ಕೆರೆ ನೀರು ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಂದ ಉದ್ಘಾಟನೆ ನೆರವೇರಿಸ ಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ತಾಲ್ಲೂಕಿನ ಅಲಗಿಲವಾಡ ಗ್ರಾಮದಲ್ಲಿ 2019-20ನೇ ಸಾಲಿನ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಅಡಿಯಲ್ಲಿ ಅಂದಾಜು 10.89 ಲಕ್ಷ ವೆಚ್ಚದಲ್ಲಿ ಚಿರಸ್ತಹಳ್ಳಿ ಯಿಂದ ಇಟ್ಟಿಗುಡಿವರೆಗೆ (ದಾದಾಪುರ, ಅಲಗಿಲವಾಡ) ನಿರ್ಮಾಣವಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.
ಅಭಿವೃದ್ಧಿ ಕಾರ್ಯಗಳೇ ನಮ್ಮ ಸರ್ಕಾರದ ಮೂಲ ಮಂತ್ರ. ಕೊರೊನಾ ಸೋಂಕಿನ ನಡುವೆ ದೇಶದ ಆರ್ಥಿಕ ಪರಿಸ್ಥಿತಿ ಕುಸಿದಿದೆ ಆದರೂ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ. ಕೊರೊನಾಗೆ ಲಸಿಕೆ ಸಿಕ್ಕ ಬಳಿಕ ನಾನು ಮತ್ತು ಶಾಸಕ ಜಿ.ಕರುಣಾಕರ ರೆಡ್ಡಿ ಅವರು ಕ್ಷೇತ್ರದ ತುಂಬೆಲ್ಲಾ ಸಂಚರಿಸುವ ಮೂಲಕ ತಾಲ್ಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ಶಾಸಕ ಜಿ.ಕರುಣಾಕರ ರೆಡ್ಡಿ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಜನಪರ ಸರ್ಕಾರವಾಗಿದ್ದು ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿನ ಭೀತಿ ಮತ್ತು ಆರ್ಥಿಕ ಸಂಕಷ್ಟದ ನಡುವೆಯೂ ರಾಜ್ಯಾದ್ಯಂತ ಅಭಿವೃದ್ಧಿ ಕಾರ್ಯಗಳು ನಡೆಯುತ್ತಲೇ ಇವೆ ಎಂದರು.
ಕ್ಷೇತ್ರದ ಅಭಿವೃದ್ಧಿಗೆ ನಾನು ಸದಾ ಸಿದ್ಧನಿದ್ದೇನೆ. ಆದರೆ ಕೊರೊನಾ ಸೋಂಕಿನ ಭೀತಿಯ ನಡುವೆ ಹೆಚ್ಚಾಗಿ ಕ್ಷೇತ್ರದ ತುಂಬೆಲ್ಲಾ ಸಂಚರಿಸಲು ಸಾಧ್ಯವಾಗಿಲ್ಲ. ಇನ್ನೂ 6-7 ತಿಂಗಳಲ್ಲಿ ಕೊರೊನಾಗೆ ವ್ಯಾಕ್ಸಿನ್ ಬರುವ ನಿರೀಕ್ಷೆ ಇದೆ. ಅದು ಬರುವವರೆಗೂ ಏನೇ ತೊಂದರೆಗಳಿದ್ದರೂ ಕ್ಷೇತ್ರದ ಜನರು ನೇರವಾಗಿ ನನಗೆ ಕರೆ ಮಾಡಿ ಮಾತನಾಡಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಸತ್ತೂರು ಹಾಲೇಶ್, ಹಲುವಾಗಲು ಜಿ.ಪಂ. ಸದಸ್ಯೆ ಡಾ.ಸುವರ್ಣ ಆರುಂಡಿ ನಾಗರಾಜ್, ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾ ಕಾರ್ಯದರ್ಶಿ ಆರ್.ಲೋಕೇಶ್, ಬಿಜೆಪಿ ತಾಲ್ಲೂಕು ಉಪಾಧ್ಯಕ್ಷ ನಿಟ್ಟೂರು ಸಣ್ಣಹಾಲಪ್ಪ, ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ನೀಲಗುಂದ ಟಿ. ಮನೋಜ್, ತಾಲ್ಲೂಕು ಪಂಚಾಯಿತಿ ಸದಸ್ಯ ಶಿಂಗ್ರಿಹಳ್ಳಿ ನಾಗರಾಜ, ಮುಖಂಡರಾದ ಬಾಗಳಿ ಕೊಟ್ರೇಶಪ್ಪ, ಆರ್.ಕರಿಗೌಡ್ರು, ಎಂ.ಸಂತೋಷ್, ವೀರೇಶ್ ಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು.