ನೇಮಕಾತಿಗಾಗಿ ಆಗ್ರಹಿಸಿ ಓಟಿ ತಂತ್ರಜ್ಞರ ಮನವಿ

ದಾವಣಗೆರೆ, ಸೆ.2- ಕೊರೊನಾ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ತಮ್ಮನ್ನು ಕೂಡಲೇ  ನೇಮಕಾತಿ ಮಾಡಿಕೊಳ್ಳುವಂತೆ ಒತ್ತಾಯಿಸಿ ನಗರದಲ್ಲಿ ಇಂದು ಜಿಲ್ಲೆಯ ಶಸ್ತ್ರಚಿಕಿತ್ಸಾ ಕೊಠಡಿ ತಂತ್ರಜ್ಞರು ಜಿಲ್ಲಾಡಳಿತಕ್ಕೆ ‌ಮನವಿ‌ ಮಾಡಿದರು.

ಜಿಲ್ಲಾಡಳಿತದ ಮುಂದೆ ಕರ್ನಾಟಕ ರಾಜ್ಯ ಶಸ್ತ್ರಚಿಕಿತ್ಸಾ ಕೊಠಡಿ ತಂತ್ರಜ್ಞರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಮಾಯಿಸಿದ್ದ ಅವರು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಮುಖೇನ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಕೊರೋನಾ ವೈರಸ್ ಸೋಂಕು ಹರಡುವ ಕಾರಣದಿಂದ ವೈದ್ಯರಿಗೆ ಹಾಗೂ ರೋಗಿಗಳಿಗೆ ಸಹಾಯ ಮಾಡಲು ಕರ್ನಾಟಕ ರಾಜ್ಯ ಶಸ್ತ್ರಚಿಕಿತ್ಸಾ ಕೊಠಡಿಯ ತಂತ್ರಜ್ಞರ ಹುದ್ದೆಗಳನ್ನು ಸರ್ಕಾರದಲ್ಲಿರುವ ಎಲ್ಲ ತಾಲ್ಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಸ್ಪತ್ರೆ ನೇಮಕಾತಿ ಮಾಡಿಕೊಳ್ಳಬೇಕು‌ ಎಂದು ಒತ್ತಾಯಿಸಿದರು.

ಕರ್ನಾಟಕ ಸರ್ಕಾರವೇ ಸೃಷ್ಟಿಸಿರುವ ಡಿಪ್ಲೋಮಾ ಇನ್ ಆಪರೇಷನ್ ಥಿಯೇಟರ್ ಟೆಕ್ನಾಲಜಿ, ಅನಸ್ತೇಶಿಯಾ ಟೆಕ್ನಾಲಜಿ, ಬಿಎಸ್ಸಿ, ಎಂಎಸ್ಸಿ ಕೋರ್ಸ್ ಅನ್ನು ಪ್ರಾರಂಭಿಸಿದಾಗಿನಿಂದ ಇಲ್ಲಿಯವರೆಗೂ ಮುಗಿಸಿರುವ 5 ಸಾವಿರದಿಂದ 6 ಸಾವಿರ ಅಭ್ಯರ್ಥಿಗಳು ಶಸ್ತ್ರಚಿಕಿತ್ಸಾ ಕೊಠಡಿಯ ಬಗ್ಗೆ ಸಂಪೂರ್ಣ ಅಭ್ಯಾಸ ಮುಗಿಸಿದ್ದು, ಸರ್ಕಾರವು ಕೊರೊನಾ ವೈರಸ್ ಸೋಂಕು ಹರಡುತ್ತಿರುವುದರಿಂದ ಇದನ್ನು ತಡೆಗಟ್ಟಲು ಕೂಡಲೇ ನಮ್ಮನ್ನು ನೇಮಕಾತಿ ಮಾಡಿಕೊಳ್ಳಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಿವಪ್ರಕಾಶ್, ಉಪಾಧ್ಯಕ್ಷ ಶಫೀವುಲ್ಲಾ, ಮಂಜುನಾಥ, ಕಿರಣ್, ಸಿದ್ದೇಶ್, ಉಷಾ, ರಮೇಶ್, ದೀಪ್ ಸೇರಿದಂತೆ ಇತರರು ಇದ್ದರು.

error: Content is protected !!