ಹರಪನಹಳ್ಳಿ, ಆ.31 – ಚುಕ್ಕೆ ರೋಗ ಮತ್ತು ಕೊಳೆ ರೋಗದಿಂದ ನಷ್ಟ ಹೊಂದಿದ ಈರುಳ್ಳಿ ಬೆಳೆಗಾರರಿಗೆ ಸರ್ಕಾರ ಈ ಕೂಡಲೇ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಎಂ.ಪಿ.ಪ್ರಕಾಶ್ ಸಮಾಜ ಮುಖಿ ಟ್ರಸ್ಟ್ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದ ರಾಜ್ಯಾಧ್ಯಕ್ಷರಾದ ಶ್ರೀಮತಿ ಎಂ.ಪಿ.ವೀಣಾ ಮಹಾಂತೇಶ್ ಚರಂತಿಮಠ್ ಮಾತನಾಡಿ, ಹರಪನಹಳ್ಳಿ ತಾಲ್ಲೂಕಿನ ರೈತರು ಸತತ ಎರಡು ವರ್ಷಗಳಿಂದ ಈರುಳ್ಳಿ ಬೆಳೆಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ.
ಈ ಬಾರಿ ಕೋವಿಡ್ನಿಂದ ಚೇತರಿಸಿಕೊಳ್ಳುವ ಮುನ್ನವೇ ಈರುಳ್ಳಿ ಬೆಳೆಗೆ ಬಂದ ಚುಕ್ಕಿ ಹಾಗೂ ತಿರುಗುಣಿ ರೋಗದಿಂದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು, ಶೇ 80 ಪ್ರತಿಶತ ರೈತರು ಹೊಲಗಳನ್ನು ಹರಗಿ ಬೆಳೆ ಪರಿವರ್ತನೆಗೆ ಮುಂದಾಗಿದ್ದಾರೆ.
ಕೂಡಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ರೈತರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ನೀಲಗುಂದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ ಮಾತನಾಡಿ, ರಾಜಕಾರಣಿಗಳು ಮೊದಲು ರೈತರು ಬದುಕಿದರೇ ಇಡೀ ಜಗತ್ತು ಬದುಕುತ್ತದೆ ಎಂಬುದನ್ನು ಅರಿಯ ಬೇಕು. ರೈತನೇ ಈ ದೇಶದ ಬೆನ್ನೆಲುಬು. ರೈತರಿಗೆ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿ. ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿ, ಸ್ವಾಮೀಜಿಗಳಾದಿಯಾಗಿ ಅನ್ನ ಬಿಟ್ಟು ಚಿನ್ನ ಉಣ್ಣುವುದಿಲ್ಲ. ಸರ್ಕಾರ ಕೈಗಾರಿಕೀರಣ, ಖಾಸಗೀಕರಣದ ಜೊತೆಗೆ ರೈತರ ಬೆನ್ನಿಗೆ ನಿಲ್ಲಬೇಕು ಎಂದರು.
ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷೆ ಬೇಗಂ, ಕರ್ನಾಟಕ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಅತ್ತಿ ಅಡಿವೆಪ್ಪ, ಕರ್ನಾಟಕ ರಾಜ್ಯ ರೈತ ಸಂಘದ ಮಹಿಳಾ ಯುವ ರಾಜ್ಯಾಧ್ಯಕ್ಷೆ ಮೈಲಾರ್ ಜ್ಯೋತಿ, ಎ.ಐ.ಯು.ಟಿ.ಸಿ. ಮುಖಂಡ ಗುಡಿಹಳ್ಳಿ ಹಾಲೇಶ್, ಎಪಿಎಂಸಿ ಅಧ್ಯಕ್ಷ ಹೆಚ್.ನಂದಿಬೇವೂರು ಅಶೋಕ್ಗೌಡ ಮಾತನಾಡಿದರು.
ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಉಮೇಶ್, ನ್ಯಾಯವಾದಿ ಸಿದ್ಧಲಿಂಗನಗೌಡ, ಪ್ರೊ.ಗುರುಪ್ರಸಾದ್, ಮೆಹಬೂಬ್ ಸಾಬ್, ದಾದಾಪೀರ್, ಮನೋಜ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.