ಜನಸಾಮಾನ್ಯರ ಹಿತ ಕಾಪಾಡುವಲ್ಲಿ ಬಿಜೆಪಿ ಸರ್ಕಾರ ವಿಫಲ

ಹರಪನಹಳ್ಳಿ : ಕಾಂಗ್ರೆಸ್ ಸಭೆಯಲ್ಲಿ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಪುಷ್ಪಾ ಅಮರನಾಥ್

ಹರಪನಹಳ್ಳಿ, ಆ.27- ದೇಶದ ಸ್ವಾತಂ ತ್ರ್ಯಕ್ಕೆ ಬಿಜೆಪಿಯ ಕೊಡುಗೆ ಶೂನ್ಯವಾಗಿದ್ದು, ಭಾವನಾತ್ಮಕ ವಿಷಯಗಳನ್ನು ಯುವ ಜನರಲ್ಲಿ ಬಿತ್ತುತ್ತಿದ್ದಾರೆ. ಪ್ರಶ್ನೆ ಮಾಡಿದವರಿಗೆ ದೇಶ ದ್ರೋಹಿಗಳು ಎಂಬ ಪಟ್ಟ ಕಟ್ಟುತ್ತಿದ್ದಾರೆ ಎಂದು ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷ ರಾದ ಪುಷ್ಪಾ ಅಮರನಾಥ್ ಹೇಳಿದರು.

ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ಇಂದು ಹಮ್ಮಿಕೊಂಡಿದ್ದ ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಬಿಜೆಪಿಯವರಿಗೆ ಹೇಳಿಕೊಳ್ಳಲು ಯಾವ ಅಭಿವೃದ್ಧಿ ವಿಷಯವೂ ಇಲ್ಲ. ಹೀಗಾಗಿ ನಾವೇ ದೇಶ ಕಟ್ಟಿದ್ದೇವೆ ಎನ್ನುತ್ತಾರೆ. ಇಂತಹ ಹಸಿ ಸುಳ್ಳನ್ನು ಜನರಿಗೆ ಮನವರಿಕೆ ಮಾಡಬೇಕಿದೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಧ್ವಜ ಎತ್ತಿ ಹಿಡಿಯುವ ದಿನಗಳು ದೂರವಿಲ್ಲ. ರಾಜ್ಯದ ಎಲ್ಲಾ ಕಡೆ ಕಾಂಗ್ರೆಸ್ ಒಲವು ಹೆಚ್ಚಾಗಿದೆ. ಮಹಿಳಾ ಶಕ್ತಿಯನ್ನು ಬಳಕೆ ಮಾಡಿಕೊಂಡು ಪಕ್ಷ ಸಂಘಟಿಸುವ ಜವಾಬ್ಧಾರಿ ಎಲ್ಲರ ಮೇಲಿದೆ. ಮಹಿಳೆಯರು ಕೂಡ ಪಕ್ಷ ಸಂಘಟನೆಗೆ ಮುನ್ನುಗ್ಗಿ ಬರಬೇಕು. ಕಾಂಗ್ರೆಸ್ ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟಿದ್ದು,  ಮೀಸಲಾತಿ ಅಸ್ತ್ರ ಇರದಿದ್ದರೆ ಎಲ್ಲಾ ಮಹಿಳೆಯರು ಅಡುಗೆ ಮನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇಂದಿರಾಗಾಂಧಿ ಮಹಿಳೆಯರಿಗೆ ಪ್ರೇರಣೆ. ದೇಶದಲ್ಲಿ ಮಹಿಳೆ, ಯುವಕರು ಸೇರಿದಂತೆ ಜನಸಾಮಾನ್ಯರ ಹಿತ ಕಾಪಾಡುವಲ್ಲಿ ಬಿಜೆಪಿ ವಿಫಲವಾಗಿದೆ. ಬಿಜೆಪಿ ಪಕ್ಷದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಿ ಕೊಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಕರೆ ನೀಡಿದರು. 

ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ,  ಕಾರ್ಯಕರ್ತರ ಪಡೆ ರಚಿಸಿ ಕೊಂಡು ಪ್ರತಿ ಹಳ್ಳಿಯಲ್ಲಿ ಮನೆ – ಮನೆಗಳಿಗೆ ತೆರಳಿ, ಮಹಿಳೆಯರನ್ನು ಮನವೊಲಿಸಿ ಪಕ್ಷದ ರಾಜಕಾರಣದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತೇವೆ ಎಂದು ತಿಳಿಸಿದರು.

ಮುಖಂಡರಾದ ಅಗ್ರಹಾರ ಅಶೋಕ್, ಕಲ್ಲಹಳ್ಳಿ ಗೋಣೆಪ್ಪ, ಮತ್ತಿಹಳ್ಳಿ ರಾಮಪ್ಪ ಮಾತನಾಡಿದರು.

ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ನಾಗಮಣಿ, ಜಿಲ್ಲಾಧ್ಯಕ್ಷೆ ಆಶಾ ಲತಾ, ಮಹಿಳಾ ಘಟಕದ ತಾಲ್ಲೂಕು ಅಧ್ಯಕ್ಷೆ ಪುಷ್ಪಾ ದಿವಾಕರ್, ತಾ.ಪಂ ಸದಸ್ಯೆ ಶಶಿಕಲಾ, ಮುಖಂಡರಾದ ಎನ್.ಟಿ.ರತ್ನಮ್ಮ, ಕಂಚಿಕೇರಿ ಜಯಲಕ್ಷ್ಮಿ, ಮತ್ತಿಹಳ್ಳಿ ಚೆನ್ನಮ್ಮ ರಾಮಣ್ಣ, ಕವಿತಾ ಸುರೇಶ್, ದುರುಗಮ್ಮ, ರೂಪ, ನಳಿನಿ ರಾಮನಗೌಡ, ನಾಗವೇಣಿ, ಗುಂಡಗತ್ತಿ ನೇತ್ರಾವತಿ, ಉಮಾ ಶಂಕರ್, ತಾ.ಪಂ ಸದಸ್ಯರಾದ ಹುಲಿಕಟ್ಟಿ ಚಂದ್ರಪ್ಪ, ಓ.ರಾಮಪ್ಪ, ಮುಖಂಡರಾದ ಕಾನಹಳ್ಳಿ ರುದ್ರಪ್ಪ, ರಾಯದುರ್ಗ ವಾಗೀಶ್, ಇರ್ಷಾದ್‌ ಭಾಷಾ, ಡಾ.ಭಾಷಾ ಮುಜಾವರ್, ಉದಯಶಂಕರ್, ಮತ್ತೂರು ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!