ನ್ಯಾಮತಿ, ಆ.27- ಶ್ರೀ ಎಳೆಗೌರಮ್ಮನನ್ನು ವಿಶೇಷ ಪೂಜಾ ವಿಧಿಗಳೊಂದಿಗೆ ಆರಾಧಿಸಿ ಗುರು ಸನ್ನಿಧಾನದಿಂದ ಭಕ್ತರೆಲ್ಲರೂ ಎಳೆಗೌರಮ್ಮನನ್ನು ಮನೆಗಳಿಗೆ ತರುವ ಮೂಲಕ ಎಳೆಗೌರಮ್ಮನ ಹಬ್ಬವನ್ನು ಸಡಗರ ಸಂಭ್ರಮದಿಂದ ಸಾಸ್ವೆಹಳ್ಳಿ ಹೋಬಳಿ ವ್ಯಾಪ್ತಿಯ ಹೊಟ್ಯಾಪುರ ಗ್ರಾಮದ ಉಜ್ಜಯಿನಿ ಶಾಖಾ ಹಿರೇ ಮಠದಲ್ಲಿ ಎಳೆಗೌರಮ್ಮನ ಹಬ್ಬವನ್ನು ಕೊರೊನಾ ವೈರಸ್‍ನಿಂದಾಗಿ ಸರಳವಾಗಿ ಆಚರಿಸಲಾಯಿತು.
ಹತ್ತಿಪೂಜೆ ಹಬ್ಬವನ್ನು ನಡೆಸಿ ಭಕ್ತರೆಲ್ಲರೂ ಗೃಹದೇವರ ಪೂಜಾ ಕಾರ್ಯದ ನಂತರ ಹೊಟ್ಯಾ ಪುರ ಉಜ್ಜಯಿನಿ ಶಾಖಾ ಹಿರೇಮಠಕ್ಕೆ ತೆರಳಿ ಶ್ರೀಗಳ ಕರ್ತೃಗದ್ದುಗೆ ಮತ್ತು ಶ್ರೀ ಎಳೆಗೌರಮ್ಮ ದೇವಿಯ ಕಲಶ ಸ್ಥಾಪಿಸಿ, ಹಿರೇಮಠದ ಶ್ರೀ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಹೊನ್ನಾಳಿ ರೇಣುಕಾಯ್ಯ ಶಾಸ್ತ್ರಿ ಹೊಳೆಮಠ, ಚನ್ನೇಶಯ್ಯಶಾಸ್ತ್ರಿ , ಕ್ಯಾಸಿನಕೆರೆ ರೇಣುಕಶಾಸ್ತ್ರಿ ಮಂತ್ರಘೋಷದೊಂದಿಗೆ ಪೂಜಾ ಕಾರ್ಯ ನೆರವೇರಿಸಿದರು.
ಎಳೆಗೌರಮ್ಮನ ಹಬ್ಬವು ಹುರುಳೇಹಳ್ಳಿ, ಹೊಟ್ಯಾಪುರ, ಸಾಸ್ವೆಹಳ್ಳಿ, ಬೆನಕನಹಳ್ಳಿ, ಕಮ್ಮಾರಘಟ್ಟೆ, ಹನುಮನಹಳ್ಳಿ, ಹುಣಸಘಟ್ಟ, ಹೊನ್ನಾಳಿ-ಶಿವಮೊಗ್ಗದಿಂದ ವಾಹನಗಳನ್ನು ಬಳಸಿ ಆಗಮಿಸಿದ್ದ ನೂರಾರು ಭಕ್ತರು ಶ್ರೀಮಠದಿಂದ ಶ್ರೀ ಎಳೆಗೌರಮ್ಮನನ್ನು ಕೊಂಡುಹೋಗುವ ಮೂಲಕ ತಮ್ಮೆಲ್ಲರ ಮನೆಗಳಲ್ಲಿಯೂ ಸಂಪ್ರದಾಯ ಬದ್ದವಾಗಿ ಮೂಲ ನಕ್ಷತ್ರದ ಶುಭ ಗಳಿಗೆಯಲ್ಲಿ ಶ್ರದ್ಧಾಭಕ್ತಿಯಿಂದ ಶ್ರೀ ಎಳೆಗೌರಮ್ಮನನ್ನು ದೇವರ ಜಗುಲಿಗಳಲ್ಲಿ ಸ್ಥಾಪಿಸಿ, ಪೂಜಾ ಕಾರ್ಯ ಸಲ್ಲಿಸಿ, ಸಂಕಷ್ಟಗಳನ್ನು ನಿವಾರಿಸಿ ಸಮೃದ್ದಿ, ಆರೋಗ್ಯ, ನೆಮ್ಮದಿಯನ್ನು ಕರುಣಿಸು ತಾಯಿ ಎಂಬುದಾಗಿ ಪ್ರಾರ್ಥಿಸುವ ಮೂಲಕ ಹಬ್ಬವನ್ನು ಕೊರೊನಾ ವೈರಸ್‍ನಿಂದಾಗಿ ಸರಳವಾಗಿ ಆಚರಿಸಿದರು.