‘ಸಂಸ್ಕಾರ’ ಕಸಿದ ಕೊರೊನಾ; ಅಗಲಿದ ಚೇತನಗಳಿಗೆ ವಿದಾಯವೂ ದುಬಾರಿ

ಹರಿಹರ, ಆ. 26- ಹುಟ್ಟಿನಿಂದ ಸಾವಿನವರೆಗೆ ಜೀವನದ ಪ್ರಮುಖ ಘಟ್ಟ ಗಳಲ್ಲಿ ಬಂಧು-ಮಿತ್ರರು ಜೊತೆಯಲ್ಲಿರು ತ್ತಾರೆ. ಕಷ್ಟ – ಸುಖ ಗಳಲ್ಲಿ ಭಾಗಿಯಾಗುತ್ತಾರೆ. ಆದರೆ, ಕೊರೊನಾ ಸಂಕಷ್ಟದ ನಂತರ ಸಾವಿನ ಮನೆಯಲ್ಲಿ ಸಾಂತ್ವನ ಹೇಳಲು ಜೊತೆಯಾಗುವವರೇ ಕಡಿಮೆಯಾಗಿದ್ದಾರೆ.

ಎಂತೆಂಥದೋ ರೋಗದಿಂದ ಸಾವನ್ನಪ್ಪಿದರೂ ಕುಟುಂಬದ ಸದಸ್ಯರು ಅವರ ಸ್ನೇಹಿತರು, ಬಂಧು ಬಳಗದವರು ಮುಂದೆ ನಿಂತು ವಿವಿಧ ರೀತಿಯ ಅಲಂಕಾರ ಮಾಡಿ ಅವರ ಅಂತ್ಯಸಂಸ್ಕಾರದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಮುಂದಾಗುತ್ತಿದ್ದರು. ಕೆಲ ವೊಮ್ಮೆ ಶುಭ ಕಾರ್ಯಗಳಿಗೆ ಬರದವರೂ ಕೊನೆ ದರ್ಶನಕ್ಕೆ ಬರುತ್ತಿದ್ದರು. ಇಹದ ನಂತರ ಪರಯಾತ್ರೆಗೆ ತೆರಳುವ ಆತ್ಮಗಳಿಗೆ ಶಾಂತಿ ಸಿಗಲೆಂದು ಹಲವಾರು ಧಾರ್ಮಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಅಂತಹ ಕಾರ್ಯಗಳಿಗೆ ತುಂಗಭದ್ರಾ ನದಿ ಪಕ್ಕದ ಹರಿಹರ ಪವಿತ್ರ ಕ್ಷೇತ್ರವೂ ಆಗಿತ್ತು. ಕೊರೊನಾ ಬಂದ ಮೇಲೆ ಮನೆಯವರೇ ಅಂತ್ಯಕ್ರಿಯೆ ಮಾಡುವುದಿಲ್ಲ, ಸರ್ಕಾರಿ ಸಿಬ್ಬಂದಿಯೇ ಮಾಡಿಕೊಳ್ಳಲಿ ಎಂದು ಹೇಳುವವರ ಸಂಖ್ಯೆ ಹೆಚ್ಚಾಗಿದೆ. ಕ್ರಿಯಾ ಕರ್ಮಗಳನ್ನು ಅರ್ಚಕರೇ ಮಾಡಿಕೊಳ್ಳಲಿ ಎಂದು ದೂರದಿಂದಲೇ ನಮಸ್ಕಾರ ಹಾಕುವ ಕಾಲ ಬಂದಿದೆ.

ಹರಿಹರದಲ್ಲಿ ಇಲ್ಲಿಯವರೆಗೆ ಕೊರೊನಾ ಸೋಂಕು ತಗುಲಿದ ವ್ಯಕ್ತಿಗಳು ಮರಣವನ್ನು ಹೊಂದಿದಾಗ ಕುಟುಂಬದ ಸದಸ್ಯರು ಸ್ನೇಹಿತರು ಹಾಗೂ ಅಭಿಮಾನಿಗಳು ಪಾಲ್ಗೊಂಡ ಉದಾಹರಣೆಗಳೇ ಕಡಿಮೆ. ಕುಟುಂಬದ ಕೆಲವರೇ ಯಾರ ಆಗಮ ನಕ್ಕೂ ಕಾಯುವುದಕ್ಕೆ ಮುಂದಾಗದೆ ಅಂತ್ಯಕ್ರಿಯೆ ನಡೆಸುತ್ತಿರುವುದು ಕಂಡುಬರುತ್ತಿದೆ.  ಕೊರೊನಾ ಸೋಂಕು ಮಾರ್ಚ್ 21 ರಂದು ಪ್ರಥಮವಾಗಿ ನಮ್ಮ ದೇಶದಲ್ಲಿ ಹರಡಿಕೊಂಡಿದ್ದ ಸಂದರ್ಭದಲ್ಲಿ ಹರಿಹರ ತಾಲ್ಲೂಕಿಗೆ ಎರಡು ತಿಂಗಳು ತಡವಾಗಿ ಹರಡಿಕೊಂಡಿದಾಗಿನಿಂದ ಇಲ್ಲಿಯವರೆಗೆ ಸುಮಾರು 28 ಕ್ಕೂ ಹೆಚ್ಚು ವ್ಯಕ್ತಿಗಳು ಕೊರೊನಾ ಸೋಂಕಿನಿಂದ ಮರಣ ಹೊಂದಿದ್ದಾರೆ.

ಕೊರೊನಾ ಸೋಂಕಿತರ ಅಂತ್ಯಸಂಸ್ಕಾರವನ್ನು ಕುಟುಂಬದವರು ನಡೆಸಲು ಮುಂದೆ ಬಂದರೆ, ಅವರಲ್ಲಿ ಎಂಟು ಜನರಿಗೆ ಸರ್ಕಾರದಿಂದ ಪಿಪಿಇ ಕಿಟ್ ಕೊಡಲಾಗುತ್ತದೆ. ಒಂದು ವೇಳೆ, ಕುಟುಂಬದ ಸದಸ್ಯರು ಅಂತ್ಯಕ್ರಿಯೆಗೆ ಹಿಂಜರಿದರೆ, ಎನ್.ಜಿ.ಒ.ಗಳ ಮೂಲಕ ಅಂತ್ಯಕ್ರಿಯೆ ಕೈಗೊಳ್ಳುತ್ತೇವೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಚಂದ್ರಮೋಹನ್ ತಿಳಿಸಿದ್ದಾರೆ.

ಡಾ. ಹನುಮನಾಯ್ಕ್ ಮಾತನಾಡಿ, ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇದುವರೆಗೂ ಮೂವರು ವ್ಯಕ್ತಿಗಳು ಮಾತ್ರ ಕೊರೊನಾ ಸೋಂಕು ತಗುಲಿರುವುದರಿಂದ ಮರಣ ಹೊಂದಿರುವುದಾಗಿ ತಿಳಿಸಿದ್ದಾರೆ.

ಸಮಾಜ ಸೇವಕ ಸೈಯದ್ ಸನಾವುಲ್ಲಾ ಮಾತನಾಡಿ, ನಾನು ಮತ್ತು ನಮ್ಮ ಪಾಪುಲರ್ ಆಫ್  ಫ್ರಂಟ್ ಯೂತ್ ವತಿಯಿಂದ ನಗರದ ಹಿಂದು ರುದ್ರಭೂಮಿಯಲ್ಲಿ 4 ಹಾಗೂ ಮುಸ್ಲಿಂ ಖಬರಸ್ಥಾನದಲ್ಲಿ 8 ಕೊರೊನಾ ಸೋಂಕಿತ ಮರಣ ಹೊಂದಿರುವ ವ್ಯಕ್ತಿಗಳಿಗೆ ಅಂತ್ಯಸಂಸ್ಕಾರ ನೆರವೇರಿಸಿರುವುದಾಗಿ ಹೇಳಿದ್ದಾರೆ.

ರುದ್ರಭೂಮಿಯಲ್ಲಿ ನೀಲಪ್ಪನವರ ತಂಡದಿಂದ ಗುಂಡಿಯನ್ನು ತೋಡಿಸಲಾಗುತ್ತಿದೆ ಎಂದಿರುವ ಸನಾವುಲ್ಲಾ, ಹರಿಹರ ನಗರದಲ್ಲಿ 12, ತಾಲ್ಲೂಕಿನ ಹಾಲಿವಾಣ ಹಾಗೂ ನಿಟ್ಟೂರು ಗ್ರಾಮದಲ್ಲಿ ತಲಾ ಒಬ್ಬ ಕೊರೊನಾ ಸೋಂಕು ತಗುಲಿ ಮೃತಪಟ್ಟ ವ್ಯಕ್ತಿಗಳಿಗೆ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ತಿಳಿಸಿದ್ದಾರೆ.


ಎಂ. ಚಿದಾನಂದ ಕಂಚಿಕೇರಿ
[email protected]

error: Content is protected !!