ಜಗಳೂರು, ಆ.25- ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬರುವ ಕೆಳಗೋಟೆ,ಕಣಕುಪ್ಪೆ, ಐನಳ್ಳಿ, ಚಿಕ್ಕಬನ್ನಿಹಟ್ಟಿ, ಪೇಟೆ ಬಾಗಿಲು, ಗುಡ್ಡದ ಲಿಂಗಣ್ಣನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರೈತರು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯ ಅಧ್ಯಕ್ಷ ಕೆ.ಪಿ. ಪಾಲಯ್ಯ ಮಾತನಾಡಿ, ರಂಗಯ್ಯನದುರ್ಗ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬರುವ 36 ಕ್ಕೂ ಹೆಚ್ಚು ಗ್ರಾಮಗಳು ಅರಣ್ಯ ಪ್ರದೇಶದ ಅಂಚಿನಲ್ಲಿ ಬರುವುದರಿಂದ ಈ ಭಾಗದ ರೈತರು ಬೆಳೆದ ಬೆಳೆಗಳನ್ನು ಕಾಡು ಪ್ರಾಣಿಗಳ ಹಾವಳಿಯಿಂದ ಹಾನಿಗೀಡಾಗಿ, ರೈತರು ಲಕ್ಷಾಂತರ ರೂಗಳ ಹಾನಿ ಅನುಭವಿಸಿದ್ದರೂ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು.
ಮೆಕ್ಕೆಜೋಳ, ಶೇಂಗಾ, ಊಟದ ಜೋಳ ಹಾಗು ಇತರೆ ಈ ವರ್ಷದ ಬೆಳೆಗಳು ಒಳ್ಳೆಯ ಸಮೃದ್ಧಿಯಾಗಿ ಬೆಳೆದು ಬಂದಿದ್ದು, ಈಗಾಗಲೇ ಕಾಡು ಪ್ರಾಣಿಗಳಾದ ಹಂದಿ, ಕರಡಿ, ಮುಳ್ಳಂದಿ ಇತರೆ ಪ್ರಾಣಿಗಳು ಸೇರಿದಂತೆ ರೈತರ ಸುಮಾರು 30 ಎಕರೆ ಜಮೀನಿನ ಬೆಳೆಗಳು ಈಗಾಗಲೇ ಸಂಪೂರ್ಣ ನಾಶವಾಗಿದ್ದು, ಈ ಕೂಡಲೇ ಸಂಬಂಧಿಸಿದ ವನ್ಯಜೀವಿ ವಲಯ ಅರಣ್ಯ ಅಧಿಕಾರಿಗಳು ಕ್ರಮ ವಹಿಸಿ ತಡೆಯುವ ಪ್ರಯತ್ನ ಮಾಡಬೇಕು ಎಂದು ಒತ್ತಾಯಿಸಿದರು.
ಕೆಳಗೋಟೆ ಗ್ರಾಮದ ರೈತ ಮುಖಂಡ ಅಮ್ಜದ್ ಅಲಿ ಮಾತನಾಡಿ, ಹಿಂದಿನ ವರ್ಷ 2019ನೇ ಸಾಲಿನ ಬೆಳೆ ಪರಿಹಾರ ಇಲ್ಲಿಯವರೆಗೂ ಯಾವೊಬ್ಬ ರೈತರಿಗೂ ಬೆಳೆ ನಷ್ಟ ಪರಿಹಾರ ತಲುಪಿಲ್ಲ. ಸಂಬಂಧಿಸಿದ ವಲಯ ಅರಣ್ಯ ಅಧಿಕಾರಿಗಳನ್ನು ಕೇಳಿದರೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ವಲಯ ಅರಣ್ಯ ಅಧಿಕಾರಿಗಳಾಗಲೀ, ರಂಗಯ್ಯನದುರ್ಗ ಅರಣ್ಯ ವನ್ಯಜೀವಿ ಅಧಿಕಾರಿಗಳಾಗಲೀ ಕಛೇರಿಯಲ್ಲಿ ಸಿಗುವುದಿಲ್ಲ. ನೇರವಾಗಿ ಭೇಟಿಯಾಗಿ ಮಾತನಾಡಲು ಕಛೇರಿಗೆ ತೆರಳಿದಾಗ ರೈತರಿಗೆ ಯಾವೊಬ್ಬ ಅಧಿಕಾರಿಯೂ ಸ್ಪಂದಿಸುತ್ತಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕೆಳಗೋಟೆ ಗ್ರಾಮದ ಮಾಜಿ ಅಧ್ಯಕ್ಷ ಅಜ್ಜಯ್ಯ, ಗ್ರಾಮದ ಮುಖಂಡರು ಗಳಾದ ಬಸಪ್ಪ, ಶಫಿವುಲ್ಲಾ, ಬಸವರಾಜ್, ನಿಂಗಣ್ಣ. ಕಮಲಮ್ಮ, ಕಲೀಮ್ ಉಲ್ಲಾ, ರತ್ನಮ್ಮ, ಶಿವು, ನಾಗರಾಜ್, ಏಕಾಂತಪ್ಪ ಲಕ್ಷ್ಮಮ್ಮ, ತಿಪ್ಪೇಸ್ವಾಮಿ, ಅಜ್ಜಪ್ಪ, ಗೀತಮ್ಮ, ನಾಗಪ್ಪ, ಶಿವಮೂರ್ತಿ, ಮಹಾಂತೇಶ ಸೇರಿದಂತೆ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.