ದಾವಣಗೆರೆ, ಆ.24- ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ದಲಿತ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ, ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ವತಿಯಿಂದ ನಗರದಲ್ಲಿ ಇಂದು ಅಣಕು ಶವಯಾತ್ರೆ ನಡೆಸಲಾಯಿತು.
ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಎಸಿ ಮತ್ತು ಡಿಸಿ ಕಚೇರಿವರೆಗೆ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಆದಿತ್ಯನಾಥ್ ಅವರ ಅಣಕು ಶವಯಾತ್ರೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ ಘಟಕದ ಮುಖಂ ಡರು, ಕಾರ್ಯಕರ್ತರು ಯೋಗಿ ಆದಿತ್ಯನಾಥ್ ಅವರ ರಾಜೀನಾಮೆಗೆ ಆಗ್ರಹಿಸಿದರು.
ಘಟಕದ ಜಿಲ್ಲಾಧ್ಯಕ್ಷ ಬಿ.ಎಚ್. ವೀರಭದ್ರಪ್ಪ ಮಾತನಾಡಿ, ಉತ್ತರ ಪ್ರದೇಶದಲ್ಲಿ ದಲಿತರ ಮೇಲೆ ದೌರ್ಜನ್ಯ, ಕೊಲೆ, ಶೋಷಣೆಯಂತಹ ಪ್ರಕರಣ ದಿನದಿನಕ್ಕೂ ಹೆಚ್ಚುತ್ತಿದ್ದರೂ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ದಲಿತರು ಅಲ್ಲಿ ಜೀವನ ನಡೆಸುವುದೇ ಕಷ್ಟವಾಗುತ್ತಿದೆ ಎಂದರು.
ದಲಿತರ ಹಿತ ಕಾಯದ, ರಕ್ಷಣೆ ನೀಡಲಾಗದ ಯೋಗಿ ಆದಿತ್ಯನಾಥ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲವೇ ರಾಷ್ಟ್ರಪತಿಗಳು ಸಿಎಂ ಯೋಗಿ ಆದಿತ್ಯನಾಥ ಅವರನ್ನು ಆ ಸ್ಥಾನದಿಂದ ವಜಾ ಮಾಡಬೇಕು. ಇಲ್ಲವಾದರೆ ಕಾಂಗ್ರೆಸ್ ಪಕ್ಷದಿಂದ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ರಾಜೀ ನಾಮೆಗೆ ಒತ್ತಾಯಿಸಿ ಮತ್ತಷ್ಟು ತೀವ್ರ ಸ್ವರೂಪದ ಹೋರಾಟ ನಡೆಸಯವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಜಿ. ರಾಕೇಶ್, ಬಿ.ಎನ್. ರಂಗನಾಥ, ಎಸ್. ಮಲ್ಲಿಕಾರ್ಜುನ, ಕುಕ್ಕವಾಡ ಮಲ್ಲೇಶ, ಪ್ರತಿಮಾ ಸುರೇಶ, ಕಲ್ಪನಹಳ್ಳಿ ವಸಂತ, ಬಿ.ಎಂ.ಈಶ್ವರಪ್ಪ, ಬಿ.ಡಿ.ಸುರೇಶ, ಬಿ.ಮಂಜುನಾಥ ಸೇರಿದಂತೆ ಇತರರು ಭಾಗವಹಿಸಿದ್ದರು.