ಬರದ ನಾಡಿಗೆ ನೀರು ತಂದ ಸರ್ವಶ್ರೇಷ್ಠ ತರಳಬಾಳು ಶ್ರೀಗಳು ‘ಆಧುನಿಕ ಭಗೀರಥ’

ಶಾಸಕರೂ, ಎಸ್ಟಿ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ ರಾಮಚಂದ್ರ ಬಣ್ಣನೆ

ಜಗಳೂರು, ಆ. 24- ಬರದ ನಾಡಿಗೆ ನೀರು ತಂದ ತರಳಬಾಳು ಜಗದ್ಗುರುಗಳು ಶತಮಾನದ ಸರ್ವಶ್ರೇಷ್ಠ ಸ್ವಾಮೀಜಿ ಹಾಗೂ ಆಧುನಿಕ ಭಗೀರಥ ಎಂದು ಶಾಸಕರೂ, ಎಸ್ಟಿ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆಗಿರುವ  ಎಸ್.ವಿ. ರಾಮಚಂದ್ರ ಬಣ್ಣಿಸಿದರು.

ಪಟ್ಟಣದ ತರಳಬಾಳು ಕೇಂದ್ರದಲ್ಲಿ   ಅಭಿಮಾನಿಗಳು ಹಾಗೂ ಭಾರತೀಯ ಜನತಾ ಪಕ್ಷದಿಂದ ಇಂದು ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಅಭಿಮಾನಿಗಳು ನನ್ನನ್ನು ಬರದ ನಾಡಿನ ಭಗೀರಥ ಎಂದು ಕರೆಯುತ್ತಾರೆ. ಆದರೆ, ನಿಜವಾದ ಭಗೀರಥ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಗಳು. ಅವರಿಂದಲೇ ನಮ್ಮ ಬರದ ನಾಡಿಗೆ ಕೆರೆ ತುಂಬಿಸುವ ಯೋಜನೆ ಜಾರಿಯಾಗಿದೆ.  ಅವರ ಸಾಮಾಜಿಕ ಕಾಳಜಿ, ರೈತರ ಪರ ಅವರ ಕಾಳಜಿ ಅಪಾರ ಎಂದು ಬಣ್ಣಿಸಿದರು.

ಯೋಜನೆಯ ಶ್ರೇಯಸ್ಸು ಶ್ರೀಗಳಿಗೆ ಸಲ್ಲಬೇಕು. ಅವರು ಹೇಳಿದ ಕೆಲಸವನ್ನು ನಾನು ಶಿರಸಾ ವಹಿಸಿ ಮಾಡಿದ್ದೇನೆ. ಶ್ರೀಗಳ ದೂರದೃಷ್ಠಿ ಸಮಾಜಪರ ಕಾಳಜಿ ನನಗೂ ಪ್ರೇರಣೆ. ನಮ್ಮ ಸರ್ಕಾರ ಪೂರ್ಣ ಹಣ ಬಿಡುಗಡೆ ಮಾಡಿದ್ದು, ಕಾಮಗಾರಿ ಭರದಿಂದ ಸಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ದೀಟೂರು ಗ್ರಾಮದ ಬಳಿ ಜಾಕ್‌ವೆಲ್ ಕೆಲಸ ಭರದಿಂದ ಸಾಗಿದೆ. 2250 ಹೆಚ್‌ಪಿ ಸಾಮರ್ಥ್ಯದ ಮೋಟಾರ್‌ಗಳನ್ನು ಅಳವಡಿ ಸಲಾಗುವುದು. ಡಿಸೆಂಬರ್ ವೇಳೆಗೆ ಕಾಮ ಗಾರಿ ಮುಗಿಯುವ ಸಂಭವವಿದ್ದು, ಮುಂ ದಿನ ಮಳೆಗಾಲಕ್ಕೆ ತಾಲ್ಲೂಕಿನ ಬಹುತೇಕ ಕೆರೆಗಳಿಗೆ ನೀರು  ಹರಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಭದ್ರಾ ಮೇಲ್ದಂಡೆ ಯೋಜನೆ ನನ್ನ ಕನಸು : ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸುವುದು ನನ್ನ ಮಹತ್ವದ ಕನಸಾಗಿದ್ದು, ಇದರ ಜಾರಿಗೆ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಹಿಂದೆ ನನ್ನ ಅಧಿಕಾರವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಮಂಜುೂರಾತಿ ದೊರೆತಿತ್ತು. ನಂತರದಲ್ಲಿ ಯಾವುದೇ ಅಭಿವೃದ್ಧಿ ಕಾಣಲಿಲ್ಲ. ಇದೀಗ ಪುನಃ ನನ್ನ ಅಧಿಕಾರ ಅವಧಿಯಲ್ಲಿ ಸಮೀಕ್ಷೆ ಪೂರ್ಣಗೊಳಿಸಿದ್ದು 1300 ಕೋಟಿ ರೂ.ವೆಚ್ಚದಲ್ಲಿ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. 40000 ಹೆಕ್ಟೇರ್ ಮೈಕ್ರೋ ಡ್ರಿಪ್ ಇರಿಗೇಷನ್ ಆಗಲಿದೆ ಎಂದರು.

ಕ್ಷೇತ್ರದ ಜನತೆ ಮೂರು ಸಾರಿ ನನ್ನನ್ನು ಗೆಲ್ಲಿಸಿದ್ದೀರಿ. ಪ್ರಾಮಾಣಿಕವಾಗಿ ಕೆಲಸ ಮಾಡಿ ನಿಮ್ಮ ಋಣ ತೀರಿಸುತ್ತೇನೆ. ಎಸ್ಟಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದರೂ ಎಲ್ಲಾ ಜಾತಿ ಸಮುದಾಯದ ಜನರಿಗೆ ಹ್ಚಿಚನ ಅನುದಾನ ತಂದು ಕೆಲಸ ಮಾಡುತ್ತೇನೆ ಎಂದರು.

ನನಗೆ ಸಚಿವ ಸ್ಥಾನ ಬೇಡ. ನೀರಾವರಿ ಯೋಜನೆಗೆ ಅನುದಾನ ನೀಡಿ ಎಂದು ನೇರವಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೆ. ಮಂಡಳಿ ಅಧ್ಯಕ್ಷ ಸ್ಥಾನ ನನಗೆ ಬಯಸದೇ ಬಂದ ಭಾಗ್ಯ ಎಂದರು.

ನನ್ನ ವಿರುದ್ಧ ಅನೇಕ ಟೀಕೆ-ಟಿಪ್ಪಣಿಗಳು ಬಂದವು. ಮನೆಯ ಮುಂದೆ ವಾಮಾಚಾರ ಮಾಡಿಸಿದರು. ಆದರೆ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಇರುವ ವರೆಗೂ ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಿಲ್ಲ. ನಿಮ್ಮ ಮನೆಯ  ಮಗನಾಗಿ ಕೆಲಸಮಾಡಿ ಋಣ ತೀರಿಸುತ್ತೇನೆ ಎಂದು ರಾಮಚಂದ್ರ ಭಾವುಕರಾಗಿ ನುಡಿದರು.

ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ, ಶಾಸಕ ರಾಮಚಂದ್ರ ಅವರನ್ನು ಬರದ ನಾಡಿನ ಭಗೀರಥ ಎಂದು ಅವರ ಅಭಿಮಾನಿಗಳು ಕರೆಯುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಏಕೆಂದರೆ ರಾಜ್ಯದಲ್ಲಿ ಕೊರೊನಾ ಆರ್ಥಿಕ ಸಂಕಷ್ಟದ ಮಧ್ಯೆಯೂ ಕೆರೆ ತುಂಬಿಸುವ ಯೋಜನೆ ಭರದಿಂದ ಸಾಗಿರುವುದಕ್ಕೆ  ರಾಮಚಂದ್ರ ಅವರ ಕಾಳಜಿ ಕಾರಣವಾಗಿದೆ ಎಂದರು.

ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ದೀಪ ಜಗದೀಶ್, ಜಿ.ಪಂ. ಸದಸ್ಯರಾದ ಎಸ್.ಕೆ. ಮಂಜುನಾಥ್, ಮಾಜಿ ಜಿ.ಪಂ. ಸದಸ್ಯ ಹೆಚ್. ನಾಗರಾಜ್, ಕೆಂಚನಗೌಡ, ಕೆ.ವಿ. ಸಿದ್ದೇಶ್, ಕೆ.ಎಸ್. ಪ್ರಭು, ಸಾಗರ್ ಅಂಜಿನಪ್ಪ ಮಾತನಾಡಿ, ಶಾಸಕರಿಗೆ ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಹೆಚ್.ಸಿ. ಮಹೇಶ್ ವಹಿಸಿದ್ದರು.

ಶ್ರೀಮತಿ ಇಂದಿರಾ ರಾಮಚಂದ್ರ, ಶಾಸಕರ ಪುತ್ರ ಅಜಯೇಂದ್ರ ಸಿಂಹ, ಜಿ.ಪಂ. ಸದಸ್ಯರಾದ ಸವಿತಾ ಕಲ್ಲೇಶಪ್ಪ, ಶಾಂತಕುಮಾರಿ, ಎಪಿಎಂಸಿ ಅಧ್ಯಕ್ಷ ರೇಣುಕಾನಂದ, ಜಿಲ್ಲಾ ಉಪಾಧ್ಯಕ್ಷ ನಾಗಪ್ಪ, ಪ್ರಧಾನ ಕಾರ್ಯದರ್ಶಿ ಜಗ ದೀಶ್, ದ್ಯಾಮನಗೌಡ, ಮಹಿಳಾ ಘಟಕದ ಅಧ್ಯಕ್ಷೆ ಪದ್ಮ, ಜೆ.ವಿ. ನಾಗರಾಜ್, ಬಿಸ್ತುವಳ್ಳಿ ಬಾಬು ಸೇರಿದಂತೆ ವಿವಿಧ ಮೋರ್ಚಾಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಪಕ್ಷದ ಹಿರಿಯ ಮುಖಂಡರು ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!