ನ್ಯಾಮತಿ, ಆ.23- ಕೋವಿಡ್ ಕೇರ್ ಸೆಂಟರ್‍ನಲ್ಲಿ ಅವ್ಯವಸ್ಥೆ ಇದೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತಾಲ್ಲೂಕಿನ ಮಾದನಬಾವಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನೂರು ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದ್ದು, ಹಾಲಿ 71 ಜನರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಊಟ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದೇ ಸೋಂಕಿತರು ಪರದಾಡುತ್ತಿದ್ದಾರೆಂದು ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಕೋವಿಡ್ ಕೇರ್ ಸೆಂಟರ್‍ಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು, ಆಹಾರದ ಗುಣಮಟ್ಟ ಪರಿಶೀಲನೆ ನಡೆಸಿ, ಸೋಂಕಿತರ ಬಳಿಯೇ ಅವರಿಗೆ ನೀಡುವ ಆಹಾರದ ಬಗ್ಗೆ ಮಾಹಿತಿ ಪಡೆದು, ಮಾಸ್ಕ್ ವಿತರಿಸಿ ಆತ್ಮಸ್ತೈರ್ಯ ತುಂಬಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋವಿಡ್ ಕೇರ್ ಸೆಂಟರ್‍ನಲ್ಲಿರುವವರೇ ಊಟ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು ಯಾವುದೇ ಅವ್ಯವಸ್ಥೆ ಇಲ್ಲ. ಸ್ವತಃ ಸೋಂಕಿತರೇ ಆಹಾರ ಚೆನ್ನಾಗಿದೆ ಎಂದು ಒಪ್ಪಿಕೊಂಡಿದ್ದು, ಕೆಲವರು ವಿನಾಕಾರಣ ಅಪಪ್ರಚಾರ ಮಾಡುತ್ತಿದ್ದು, ಇದಕ್ಕೆ ಕಿವಿಗೊಡದಂತೆ ಮನವಿ ಮಾಡಿದರು.
ಕೋವಿಡ್ ಕೇರ್ ಸೆಂಟರ್‌ನಲ್ಲಿ ಹೊನ್ನಾಳಿ- ನ್ಯಾಮತಿ ಅವಳಿ ತಾಲ್ಲೂಕಿನ 71 ಜನರಿದ್ದು, ಅಧಿಕಾರಿಗಳು ಕೋವಿಡ್ ಕೇರ್ ಸೆಂಟರ್‍ಗೆ ಬೇಕಾದ ಅಗತ್ಯ ವ್ಯವಸ್ಥೆ ಕಲ್ಪಿಸಿದ್ದಾರೆ. ಹಾಗೇನಾದರೂ ಸಣ್ಣ-ಪುಟ್ಟ ಲೋಪಗಳಿದ್ದರೇ ಇದು ತಮ್ಮ ಮನೆ ಎಂದು ತಿಳಿದುಕೊಳ್ಳುವಂತೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ.ಎಲ್.ರಂಗನಾಥ್, ಉಪಾಧ್ಯಕ್ಷ ಮರಿಕಣ್ಣಪ್ಪ, ತಹಶೀಲ್ದಾರ್ ತುಷಾರ್ ಬಿ. ಹೊಸೂರ್, ಉಪ ತಹಶೀಲ್ದಾರ್ ನಾಗರಾಜ್, ತಾಲ್ಲೂಕು ಆರೋಗ್ಯಾಧಿಕಾರಿ ಕೆಂಚಪ್ಪ ಸೇರಿದಂತೆ ಮತ್ತಿತರರಿದ್ದರು.