ಛಲವಿದ್ದಲ್ಲಿ ಯಾವುದೂ ಅಸಾಧ್ಯವಲ್ಲ

ಹರಿಹರದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಸನ್ಮಾನ ಸಮಾರಂಭ

ಹರಿಹರ, ಆ- 23 ಸಾಧಿಸುವ ಛಲ ಇದ್ದರೆ ಯಾವುದೂ ಅಸಾಧ್ಯವಲ್ಲ. ಆದರೆ ಸಾಧಿಸುವ ಗುರಿ, ಆತ್ಮವಿಶ್ವಾಸ ನಮ್ಮಲ್ಲಿರಬೇಕು ಎಂದು 33 ಕರ್ನಾಟಕ ಬೆಟಾಲಿಯನ್ ಹಿರಿಯ ಸಹಾಯಕ ಎನ್‌ಸಿಸಿ  ಅಧಿಕಾರಿ ಶ್ರೀಶ್ಮ ಹೆಗಡೆ  ಅಭಿಪ್ರಾಯಪಟ್ಟರು.

ನಗರದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜು ವತಿಯಿಂದ  ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ  ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಾನು ಈ ಎತ್ತರಕ್ಕೆ ಬರುವಲ್ಲಿ ಅನೇಕ ಸವಾಲು ಗಳನ್ನು ಎದುರಿಸಬೇಕಾಯಿತು. ಎನ್‌ಸಿಸಿಯ ನನ್ನ ಕೆಲ ಪ್ರೌಢಶಾಲೆಯ ಸಹಪಾಠಿಗಳು ಚಿಕ್ಕ ಚಿಕ್ಕ ಕಾರಣಗಳಿಗೆ ಎನ್‌ಸಿಸಿ ತರಬೇತಿಯಿಂದ ಹೊರ ನಡೆದರು. ಆದರೆ ನಾನು ಮಾತ್ರ ಛಲ ಬಿಡದೇ ಅದರಲ್ಲಿ ಮುಂದುವರೆಯಬೇಕೆಂದು ದೃಢ ನಿಶ್ಚಯ ಮಾಡಿದೆ. ಇದಕ್ಕಾಗಿ ನನ್ನ ಪೋಷಕರೂ ಸಹ ಬೆಂ ಬಲ ವ್ಯಕ್ತಪಡಿಸಿದರು. ನನ್ನ ಶಿಕ್ಷಣದೊಂದಿಗೆ ಈ ಸಾಧನೆ ಮಾಡುವಲ್ಲಿ ನನ್ನ ಶಾಲಾ – ಕಾಲೇಜಿನ ಶಿಕ್ಷ ಕರ ಸಹಕಾರ ಕೂಡ ಮಹತ್ತರವಾದುದು ಎಂದರು. 

ವಿವಿಧ ರಾಷ್ಟ್ರಗಳ ಪ್ರತಿನಿಧಿಗಳೊಂದಿಗೆ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ   ಎದುರು ಎನ್‌ಸಿಸಿ ತಂಡದ ನಾಯಕಿಯಾಗಿ ಪಥಸಂಚಲನವನ್ನು ಮುನ್ನಡೆಸಿದ್ದು ನನ್ನ ಜೀವನದ ಮರೆಯಲಾರದ ಘಟನೆ.

– ಶ್ರೀಶ್ಮ ಹೆಗಡೆ, ಎನ್‌ಸಿಸಿ ಅಧಿಕಾರಿ

ಪ್ರಸ್ತುತ ವರ್ಷ ದೆಹಲಿಯಲ್ಲಿ  ನಡೆದ ಗಣರಾಜ್ಯೋತ್ಸವ ಸಮಾರಂಭದ ಪಥಸಂಚಲನದಲ್ಲಿ ಭಾಗವಹಿಸಿದ್ದು ನನ್ನ ಜೀವನದ ಸ್ಮರಣೀಯ ದಿನವಾಗಿದೆ ಎಂದು ಭಾವುಕರಾದರು. 

ಸಂತ ಅಲೋಶಿಯಸ್ ಕಾಲೇಜು ಮುಖ್ಯಸ್ಥ ಫಾದರ್ ಎರಿಕ್ ಮತಾಯಸ್ ಮಾತನಾಡಿ,  ಶ್ರೀಶ್ಮ  ಅವರ ಧನಾತ್ಮಕ ಚಿಂತನೆಗಳು, ಕಠಿಣ ಪರಿಶ್ರಮ, ನಿಷ್ಕಲ್ಮಶ ಮನಸ್ಸು ಅವರನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯಲು ಕಾರಣವಾಗಿದೆ. 

ವಿದ್ಯಾರ್ಥಿಗಳಲ್ಲಿ ಎನ್‌ಸಿಸಿ ಮತ್ತು ಎನ್‌ಎಸ್ಎಸ್‌ನಂತಹ ಚಟುವಟಿಕೆಗಳು ಶಿಕ್ಷಣದೊಂದಿಗೆ ಮಾನಸಿಕ ಸ್ಥಿಮಿತ ಹಾಗೂ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. 

ವೇದಿಕೆಯಲ್ಲಿ ಫಾದರ್ ರಾಯಪ್ಪ, ಫ್ರಾನ್ಸಿಸ್ ಬಾಲರಾಜ್, ಉಪಪ್ರಾಂಶುಪಾಲರಾದ ಪುಷ್ಪಲತಾ ಅರಸ್, ಪ್ರಿನ್ಸಿ ಫ್ಲಾವಿಯಾ,  ಕಾರ್ಯಕ್ರಮದ ಸಂಯೋಜಕಿ  ಅಲ್‌ಜೆಸ್ಸೀನಾ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!