ಸೋಂಕು ತಗುಲಿದ ವೇಳೆ ಪೊಲೀಸ್ ಸಿಬ್ಬಂದಿ ಧೃತಿಗೆಡದಿರಿ

ಇಲಾಖೆ ಸದಾ ನಿಮ್ಮೊಂದಿಗಿರುತ್ತದೆ  : ಡಿವೈಎಸ್ಪಿ ನರಸಿಂಹ ತಾಮ್ರಧ್ವಜ

ಹರಿಹರ, ಆ.19 – ಕೋವಿಡ್ 19  ಸೋಂಕು ತಗುಲಿದ ಸಂದರ್ಭದಲ್ಲಿ ಸಿಬ್ಬಂದಿ ಗಳು ಧೃತಿಗೆಡಬೇಡಿ ಧೈರ್ಯವಾಗಿರಿ, ಇಲಾ ಖೆಯು ಸದಾ ನಿಮ್ಮೊಂದಿಗಿರುತ್ತದೆ ಎಂದು ದಾವಣಗೆರೆ ಜಿಲ್ಲಾ ಗ್ರಾಮಾಂತರ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಭರವಸೆ ನೀಡಿದರು.

ನಗರ ಪೋಲಿಸ್ ಠಾಣಾ ಆವರಣದಲ್ಲಿ ಕೋವಿಡ್ 19 ಪಾಸಿಟಿವ್ ಬಂದಿದ್ದ ಗುತ್ತೂರು ಗ್ರಾಮಾಂತರ ಠಾಣೆಯ ಪಿಎಸ್ಐ ಇಬ್ಬರು ಪೊಲೀಸ್ ಸಿಬ್ಬಂದಿಗಳು ಹೋಂ ಕ್ವಾರಂಟೈನ್ ಅವಧಿ ಪೂರೈಸಿ ಸಂಪೂರ್ಣ ಗುಣಮುಖರಾಗಿ ಆಗಮಿಸಿದಾಗ ಅವರಿಗೆ ಇಲಾಖೆಯ ವತಿಯಿಂದ ಪುಷ್ಪವೃಷ್ಠಿ ಗೈದು ಅವರನ್ನು ಸ್ವಾಗತಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಅನೇಕರು ಹಗಲಿರುಳೆನ್ನದೆ ತಮ್ಮ ಜೀವದ ಹಂಗು ಮತ್ತು ಕುಟುಂಬವನ್ನು ತೊರೆದು ಕೊರೊನಾ ವಿರುದ್ಧ ಸೇವೆ ಮಾಡುತ್ತಿದ್ದಾರೆ ಇಂತಹ ಸೇವೆಯನ್ನು ಇಲಾಖೆಯು ಎಂದೆಂದಿಗೂ ಸ್ಮರಿಸುತ್ತದೆ. ಈ ಸಂದರ್ಭದಲ್ಲಿ ಸಿಬ್ಬಂದಿಗೆ ಪಾಸಿಟಿವ್ ಅಥವಾ ಯಾವುದೇ ರೀತಿಯ ತೊಂದರೆಗಳಾದಾಗ ಇಲಾಖೆಯು ಅವರೊಂದಿಗೆ ಸದಾ ಸ್ಪಂದನೆಯಲ್ಲಿರುತ್ತದೆ ಎಂದು ಹೇಳಿದರು.

ಈ ವೇಳೆ ಸೋಂಕಿನಿಂದ ಯಶಸ್ವಿಯಾಗಿ ಹೊರ ಬಂದ ಗ್ರಾಮಾಂತರ ಪಿಎಸ್ಐ ರವಿಕುಮಾರ್ ಮಾತನಾಡಿ, ನನಗೆ ಕೊರೊನಾ ಪಾಸಿಟಿವ್ ಇದೆ ಎಂಬ ವರದಿ ತಿಳಿದಾಗ ತುಂಬಾ ಹೆದರಿ ಕೊಂಡಿದ್ದೇನು, ಆದರೆ ಆ ಸಂದರ್ಭದಲ್ಲಿ ನಮ್ಮ ಇಲಾಖೆಯ ಎಲ್ಲಾ ಮೇಲಾಧಿಕಾರಿಗಳು ನನಗೆ ದೂರವಾಣಿ ಕರೆ ಮಾಡಿ ನೀವು ಯಾವುದೇ ಕಾರಣಕ್ಕೂ ಹೆದರ ಬೇಕಾಗಿಲ್ಲ, ನಿಮ್ಮೊಂದಿಗೆ ಯಾವಾಗಲೂ ಇಲಾಖೆ ಮತ್ತು ನಾವುಗಳೆಲ್ಲರೂ ಇದ್ದೇವೆ. ಧೈರ್ಯವಾಗಿ ಚಿಕಿತ್ಸೆಯನ್ನು ಪಡೆಯಿರಿ ಎಂದು ನನಗೆ ಧೈರ್ಯ ತುಂಬಿದ್ದರು ಎಂದು ಭಾವುಕರಾಗಿ ಹೇಳಿದರು.

ಕೊರೊನಾ ವೈರಸ್ ಬಗ್ಗೆ ಮಾತನಾಡಿದ ಅವರು, ಇದೇನೂ ಅಂತಹ ದೊಡ್ಡ ಕಾಯಿಲೆಯೇನಲ್ಲ. ಇದಕ್ಕೆ ಹೆದರುವ ಕಾರಣವೂ ಇಲ್ಲ, ಇದೊಂದು ಸಾಮಾನ್ಯ ಕಾಯಿಲೆಯಾಗಿದೆ, ಎಲ್ಲರಿಗೂ ಮಳೆಗಾಲದಲ್ಲಿ ಬರುವ ಶೀತ – ಕೆಮ್ಮು – ನೆಗಡಿಯ ಮಾದರಿಯ ಕಾಯಿಲೆಯಾಗಿದೆ. ಯಾರೂ ಇದಕ್ಕೆ ಅಂಜಬೇಕಾಗಿಲ್ಲ. ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದರೆ ಗುಣರಾಗು ವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಗ್ರಾಮಾಂತರ ಪಿಎಸ್ಐ ಡಿ. ರವಿ ಕುಮಾರ್, ಗ್ರಾಮಾಂತರ ಎಎಸ್ಐ ರಮೇಶ್, ಮಲೆಬೆನ್ನೂರಿನ ಹೆಡ್ ಕಾನ್ಸ್ಟೆಬಲ್ ಬೀರಪ್ಪ ಈ ಮೂವರನ್ನು ಪುಷ್ಪವೃಷ್ಟಿ ಗೈದು ಸ್ವಾಗತಿಸ ಲಾಯಿತು. ಈ ಸಮಯದಲ್ಲಿ ಸಿಪಿಐ ಎಂ. ಶಿವಪ್ರಸಾದ್ ಮಠದ್, ನಗರಠಾಣೆ ಪಿಎಸ್ಐ ಎಸ್. ಶೈಲಶ್ರೀ, ಕ್ರೈಂ ಬ್ರಾಂಚ್ ಪಿಎಸ್ಐ ಮುಕ್ತಿಯಾರ್ ಪಾಷಾ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!