ಹರಿಹರದ ತರಕಾರಿ ಮಾರುಕಟ್ಟೆ ಮಳಿಗೆ ಕಾಮಗಾರಿ ಗುದ್ದಲಿ ಪೂಜೆಯಲ್ಲಿ ಶಾಸಕ ಎಸ್. ರಾಮಪ್ಪ
ಹರಿಹರ,18- ನಗರದ ಮಧ್ಯಭಾಗದಲ್ಲಿ ಇರುವ ರಾಜಕಾಲುವೆ ಮೇಲೆ ಮಳಿಗೆಗಳು ಕಟ್ಟುವುದಕ್ಕೆ ನಾನು ವಿರೋಧ ಮಾಡಿಲ್ಲ. ಆದರೆ ಸ್ಥಳೀಯರಿಗೆ ಪರ್ಯಾಯವಾದ ವ್ಯವಸ್ಥೆಯನ್ನು ಕಲ್ಪಿಸಿದ ನಂತರದಲ್ಲಿ ಕಾಮಗಾರಿ ಪ್ರಾರಂಭಿಸಲಿ ಎಂಬ ಉದ್ದೇಶದಿಂದ ಕಾಮಗಾರಿ ನಿಲ್ಲಿಸಲಾಗಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.
ನಗರದ ಹಳೇ ಕೋರ್ಟ್ ಸ್ಥಳದಲ್ಲಿ ನಗರಸಭೆ ವತಿಯಿಂದ ಕೇಂದ್ರ ಸರ್ಕಾರದ ದೀನ ದಯಾಳ್ ಯೋಜನೆ ಅಡಿಯಲ್ಲಿ ಸುಮಾರು 44 ಲಕ್ಷ ರೂ. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆಯ 36 ಮಳಿಗೆ ಕಾಮ ಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಪತ್ರಕರ್ತ ರೊಂದಿಗೆ ಅವರು ಮಾತನಾಡಿದರು.
ರಾಜಕಾಲುವೆ ಸೇತುವೆ ಮೇಲೆ ಮಳಿಗೆಗಳು ನಿರ್ಮಾಣ ಮಾಡುವುದಕ್ಕೆ ನಿರ್ಮಿತಿ ಕೇಂದ್ರದವರಿಂದ 1 ಕೋಟಿ 95 ಲಕ್ಷ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಯಿತು. ಆದರೆ ಸರ್ಕಾರ ಬದಲಾವಣೆ ಆದಮೇಲೆ ಹಣವನ್ನು ನಿಲ್ಲಿಸಲಾಗಿದೆ.
ಹಳೇ ಪಿ.ಬಿ. ರಸ್ತೆಯ ಸೇತುವೆಯ ಬಳಿ ಕಾಮಗಾರಿ ಅರ್ಧದಲ್ಲಿ ನಿಲ್ಲಿಸುವುದಕ್ಕೂ ಇದೇ ಕಾರಣ. ಅಲ್ಲಿ ಕೋಮು ವಿಚಾರಗಳನ್ನು ತಂದು ಅಭಿವೃದ್ಧಿಗೆ ಅಡ್ಡಗಾಲು ಹಾಕಿದರು. ಈ ರೀತಿಯಲ್ಲಿ ತೊಂದರೆ ಆಗಿರುವುದರಿಂದ ಕೆಲವು ಕಾಮಗಾರಿ ಸ್ಥಗಿತಗೊಂಡು ಅಭಿವೃದ್ಧಿ ಕುಂಠಿತವಾಗಿದೆ ಎಂದು ಹೇಳಿದರು.
ರಚನಾ ಕ್ರೀಡಾ ಟ್ರಸ್ಟ್ ಪಕ್ಕದಲ್ಲಿ ಇರುವ ಸ್ಥಳ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದು. ಹಾಗಾಗಿ ಅಲ್ಲಿ ಗುದ್ದಲಿ ಪೂಜೆ ಮಾಡುವುದನ್ನು ತಡೆದು ಪಕ್ಕದಲ್ಲಿ ಕಾಮಗಾರಿ ಪ್ರಾರಂಭಿಸಲು ಸೂಚನೆ ನೀಡಲಾಯಿತು.
ಕಾಂಗ್ರೆಸ್ ಪಕ್ಷದ ಆಸ್ತಿ ಎಂದು ನಮ್ಮಲ್ಲಿ ದಾಖಲೆಗಳು ಇವೆ. ಕೊರೊನಾ ಸಮಸ್ಯೆ ಕಡಿಮೆ ಆದ ನಂತರದಲ್ಲಿ ಪಕ್ಷದ ಕಚೇರಿ ಕಟ್ಟುವುದಕ್ಕೆ ಪ್ರಾರಂಭ ಮಾಡಲಾಗುತ್ತದೆ. ರಚನಾ ಕ್ರೀಡಾ ಟ್ರಸ್ಟ್ ಆಡಳಿತ ಬೇರೆ ಗ್ರಾಮದ ಅಧ್ಯಕ್ಷರ ಕೈಯಲ್ಲಿ ಇರುವುದರಿಂದ ಹಾಗೂ ನಗರಸಭೆಗೆ ನೊಂದಣಿ ಮಾಡಿಸದೆ ಇರುವುದರಿಂದ ರಚನಾ ಕ್ರೀಡಾ ಟ್ರಸ್ಟ್ ನ 160/160 ಅಡಿ ಜಾಗವನ್ನು ನಗರಸಭೆ ವಶಪಡಿಸಿಕೊಳ್ಳಬೇಕು.
ಹರಿಹರ ಟೌನ್ ಪುಟ್ಬಾಲ್ ಸಮಿತಿಯಡಿಯಲ್ಲಿ ಇರುವ ಸ್ಥಳವನ್ನು ಸಹ ನಗರಸಭೆ ವಶಕ್ಕೆ ತೆಗೆದುಕೊಳ್ಳಬೇಕು. ಎಸ್.ಜೆ.ವಿ.ಪಿ. ಕಾಲೇಜು ಹಿಂಬದಿಯಲ್ಲಿ ರಾಜಕಾಲುವೆಯನ್ನು ಕಾಲೇಜು ಆಡಳಿತ ಮಂಡಳಿ 2 ಎಕರೆ ಪ್ರದೇಶವನ್ನು ಒತ್ತುವರಿ ಮಾಡುವುದಕ್ಕೆ ಮುಂದಾಗಿದ್ದು, ಅದನ್ನು ತಡೆಯಬೇಕು. ನಗರಸಭೆ ಅಧ್ಯಕ್ಷರ ಚುನಾವಣೆ ನಡೆದ ತಕ್ಷಣವೇ ನಗರದಲ್ಲಿ ಇರುವ ಸರ್ಕಾರಿ ಜಾಗದಲ್ಲಿ ಪ್ರಬಲವಾದ ವ್ಯಕ್ತಿಗಳು ಆಕ್ರಮವಾಗಿ ಇದ್ದರೂ ಅವರಿಂದ ತೆರವುಗೊಳಿಸಿ ಸುಂದರವಾದ ನಗರವನ್ನು ಮಾಡುವುದಾಗಿ ಹೇಳಿದರು.
ಪೌರಾಯುಕ್ತರಾದ ಎಸ್. ಲಕ್ಷ್ಮೀ ಮಾತನಾಡಿ, ಕೇಂದ್ರ ಸರ್ಕಾರದ ದೀನದಯಾಳ್ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಸುಮಾರು 36 ಮಳಿಗೆಗಳು ಬಡವರು ವ್ಯಾಪಾರ ವಹಿವಾಟು ಮಾಡುವುದಕ್ಕೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಮಾಡಲಾಗುತ್ತಿದೆ ಎಂದರು. ಕಾಂಗ್ರೆಸ್ ಪಕ್ಷದ ಜಾಗ ಇದೆ ಎಂದು ನಗರಸಭೆಯ ದಾಖಲೆ ಪುಸ್ತಕದಲ್ಲಿ ಯಾವುದೇ ರೀತಿಯ ನೊಂದಣಿ ಇರುವುದಿಲ್ಲ. ಮುಂದೆ ಅವರು ದಾಖಲೆಗಳನ್ನು ತಂದರೆ ಪರಿಶೀಲನೆ ಮಾಡಲಾಗುತ್ತದೆ ಎಂದು ಹೇಳಿದರು.
ತರಕಾರಿ ವ್ಯಾಪಾರಿ ಮಂಜುಳಾ ಮಾತನಾಡಿ, ತರಕಾರಿ ಹೋಲ್ ಸೇಲ್ ವ್ಯಾಪಾರಸ್ಥರು ಸಹ ಚಿಲ್ಲರೆ ವ್ಯಾಪಾರ ವಹಿವಾಟು ಮಾಡುವುದರಿಂದ ನಮ್ಮಂತ ಚಿಲ್ಲರೆ ವ್ಯಾಪಾರಿಗಳಿಗೆ ತೊಂದರೆ ಆಗುತ್ತಿದೆ. ಅವರನ್ನು ದೂರದ ಎಪಿಎಂಸಿ ಆವರಣದಲ್ಲಿ ವ್ಯಾಪಾರ ವಹಿವಾಟು ಮಾಡುವುದಕ್ಕೆ ಅಧಿಕಾರಿಗಳು ಮತ್ತು ಶಾಸಕರು ಸೂಚನೆ ನೀಡಬೇಕು ಎಂದು ಹೇಳಿದರು.
ನಗರಸಭೆ ಸದಸ್ಯರಾದ ಶಂಕರ್ ಖಟಾವ್ಕಾರ್, ಎಸ್. ಎಂ. ವಸಂತ್, ಕೆ.ಜಿ. ಸಿದ್ದೇಶ್, ಪಿ.ಎನ್. ವಿರೂಪಾಕ್ಷ, ವಿಜಯಕುಮಾರ್, ದಿನೇಶ್ ಬಾಬು, ಅಶ್ವಿನಿ ಕೆ.ಜಿ. ಕೃಷ್ಣ, ನಿತಾ ಮೇಹರ್ವಾಡೆ, ದಾದಾಖಲಂದರ್, ಮಹಬೂಬ್ ಬಾಷಾ, ಮುಜಾಮಿಲ್ ಬಿಲ್ಲು, ಹನುಮಂತಪ್ಪ, ಎಎಇ ಬಿರಾದಾರ, ನಗರಸಭೆ ಸಿಬ್ಬಂದಿಗಳಾದ ಇಂಜಿನಿಯರ್ ಅಬ್ದುಲ್ ಹಮೀದ್ , ಅನ್ವರ ಪಾಷಾ, ವಸಂತ್, ಮುಖಂಡರಾದ ಮರಿದೇವ್, ಜಾಕಿರ್, ಮನಾಸ್ಸುರ್ ಮದ್ದಿ, ದಾದಾಪೀರ್ ಭಾನುವಳ್ಳಿ ಇನ್ನಿತರರಿದ್ದರು.