ನ್ಯಾಮತಿ, ಆ.17- ವಿಶ್ವೇಶ್ವರ ಎಂಬ ಹೆಸರಿಗೆ ತಕ್ಕಹಾಗೆ ವಿಶಾಲತೆಯ ಮಾತೃ ಹೃದಯವನ್ನು ಹೊಂದಿ ಸಮಾನತೆಯ ಅರ್ಥಕ್ಕೆ ನೀಡುವ ಮೂಲಕ ಬೃಹನ್ಮಠದ ಲಿಂಗೈಕ್ಯ ಶ್ರೀ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರು ನೆನಪು ಶಾಶ್ವತವಾಗಿ ಉಳಿಯುವಂತೆ ಬಿಟ್ಟು ಹೋಗಿದ್ದಾರೆ ಎಂದು ಹೊಟ್ಯಾಪುರ ಕ್ಷೇತ್ರದ ಉಜ್ಜಯಿನಿಯ ಶಾಖಾ ಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಕಲ್ಮಠದಲ್ಲಿ ಇಂದು ಆಯೋಜಿಸಲಾಗಿದ್ದ ಲಿಂಗೈಕ್ಯ ಸ್ವಾಮೀಜಿಯವರ ಪುಣ್ಯಾರಾಧನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಎಷ್ಟು ದಿನ ಬದುಕಿದೆ ಎನ್ನುವುದಕ್ಕಿಂತ ಎಷ್ಟು ಜನರಿಗೆ ಉಪಕಾರ ಮಾಡಿದೆ ಎಂಬುದು ಮುಖ್ಯ. ಶ್ರೀ ಮಠದಲ್ಲಿ ಅನ್ನ, ಆರೋಗ್ಯ, ಜ್ಞಾನ ದಾಸೋಹದ ಮೂಲಕ ಬಡವ, ಶ್ರೀಮಂತ ಎಂಬ ಬೇಧ – ಭಾವ ಮಾಡದೇ ಎಲ್ಲರೂ ಒಂದೇ ಎಂದು ತಿಳಿದಿದ್ದ ಹಾಲಸ್ವಾಮೀಜಿ, ಭಕ್ತರ ಬಗ್ಗೆ ಅತೀವ ಪ್ರೀತಿಯನ್ನು ಹೊಂದಿ, ಯಾವಾಗಲೂ ಭಕ್ತರೇ ನಮ್ಮ ಮತ್ತು ಮಠದ ಆಸ್ತಿ ಎನ್ನುತ್ತಿದ್ದರು. ಈ ಬೃಹನ್ಮಠ ರಾಜ್ಯದಲ್ಲೇ ಪ್ರಸಿದ್ಧಿ ಪಡೆದಿದೆ.
185 ಮಠಗಳನ್ನು ಹೊಂದಿದೆ ಎಂದು ಗಿರಿಸಿದ್ದೇಶ್ವರ ಶ್ರೀಗಳು ಹಾಲಸ್ವಾಮೀಜಿಯವರನ್ನು ನೆನೆದು ಎಂದು ಭಾವುಕರಾದರು.
ಲಿಂಗೈಕ್ಯ ಬೃಹನ್ಮಠದ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರು ಪುಣ್ಯಾರಾ ಧನೆಯ ಅಂಗವಾಗಿ ಶ್ರೀ ಜಡೆಯ ಶಂಕರಸ್ವಾಮಿ , ಶ್ರೀ ವೀರಭದ್ರೇಶ್ವರ ಶಿಲಾಮೂರ್ತಿಗೆ ರುದ್ರಾಭಿಷೇಕ, ಧಾರ್ಮಿಕ ವಿಧಿಗಳು ನಡೆದವು. ಹೂವಿನಿಂದ ಅಲಂಕೃತಗೊಂಡ ಮಂಟಪದಲ್ಲಿ ಶ್ರೀಗಳ ಭಾವಚಿತ್ರವನ್ನು ಇಟ್ಟು, ಪೂಜೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಎಂ.ಎಸ್.ಶಾಸ್ತ್ರಿ ಹೊಳೆಮಠ್ ಮಾತನಾಡಿದರು. ಅರ್ಚಕ ಶಿವಯ್ಯ, ಕಲ್ಮಠದ ಸೇವಾ ಸಮಿತಿಯ ಮುಖಂಡರಾದ ಹೆಚ್.ಕಾಂತರಾಜ್, ಹೆಚ್.ಮಹೇಶ್, ಪ್ರಸನ್ನ, ಪ್ರವೀಣ, ಹೆಚ್.ಹರ್ಷ, ಕರಿಬಸಪ್ಪ ಸೇರಿದಂತೆ ಇತರರು ಇದ್ದರು.