ಜಗಳೂರಿನಲ್ಲಿ ಸುಸಜ್ಜಿತ ಪತ್ರಕರ್ತರ ಭವನ ನಿರ್ಮಾಣ

ಜಗಳೂರು, ಆ.16 – ವಿವಿಧ ಅನುದಾನಗಳನ್ನು ಕ್ರೋಢಿಕರಿಸಿ ಸುಮಾರು 20 ಲಕ್ಷ ರೂ.ಗಳ ವೆಚ್ಚದಲ್ಲಿ ಸುಸಜ್ಜಿತ ಪತ್ರಕರ್ತರ ಭವನ ನಿರ್ಮಿಸಿಕೊಡುತ್ತೇನೆ ಎಂದು ಶಾಸಕರು, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾದ ಎಸ್.ವಿ ರಾಮಚಂದ್ರ ಹೇಳಿದರು. 

ಇಲ್ಲಿನ ವಿದ್ಯಾನಗರದಲ್ಲಿ ಶನಿವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಭವನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. 

ಕಳೆದ ಐದಾರು ತಿಂಗಳಿಂದಲೂ ತಾಲ್ಲೂಕು ಆಡಳಿತದ ಜತೆಯಲ್ಲಿ ಪತ್ರಕರ್ತರು ಕೊರೊನಾ ವೈರಾಣು ಜಾಗೃತಿ ಮೂಡಿಸಲು  ವಾರಿಯರ್ಸ್‍ಗ ಳಾಗಿ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪತ್ರಕರ್ತರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ವಾಸ್ಥವ ವರದಿಗಳನ್ನ ಬರೆಯಬೇಕು. ವಿರೋಧ ಪಕ್ಷದವರು ಮಾಡುವ ಸುಳ್ಳು ಆರೋಪಗಳಿಗೆ ಹೆಚ್ಚಿನ ಪ್ರಚಾರ ನೀಡುವುದು ಸರಿಯಲ್ಲ ಎಂದರು.  

ಕೊರೊನಾ ಹಾವಳಿಯ ನಡುವೆಯೂ ಕ್ಷೇತ್ರ ಅಭಿವೃದ್ಧಿಯಲ್ಲಿ ದಾಪುಗಾಲಿಡುತ್ತಿದೆ, ಯಾರೋ ಗೊತ್ತಿಲ್ಲದವರು, ಅಧಿಕಾರದಲ್ಲಿದ್ದಾಗ ಏನೂ ಸಾಧನೆ ಮಾಡದವರು ಈಗ ನಮಗೆ ಶೂನ್ಯ ಸಾಧನೆ ಮಾಡಿದ್ದಾರೆಂದು ನನ್ನ ಬಗ್ಗೆ ಹೇಳಿದ್ದಾರೆ. ಆದರೆ, ನನ್ನ ಸಾಧನೆ ಕ್ಷೇತ್ರದ ಜನರ ಮುಂದಿದೆ ಎಂದರು. 

ಸಿರಿಗೆರೆಯ ಡಾ. ಶಿವಮೂರ್ತಿ ಶಿವಾ ಚಾರ್ಯ ಶ್ರೀಗಳು  ಬರದನಾಡು ಜಗಳೂರನ್ನು ಹಸಿರನ್ನಾಗಿ ಮಾಡುವ ಸಂಕಲ್ಪದಿಂದ ಸರ್ಕಾರ ಗಳ ಮೇಲೆ ಒತ್ತಡ ಹಾಕಿದ್ದರಿಂದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅಂದಿನ ಸಿಎಂ ಸಿದ್ದರಾಮಯ್ಯನವರು 260 ಕೋಟಿ ಮಂಜೂ ರಾತಿ ನೀಡಿದ್ದರು. ಎಚ್.ಡಿ ಕುಮಾರ್‍ಸ್ವಾಮಿ ನೀರು ಹಂಚಿಕೆ ಮಾಡಿದರು. ಬಿ.ಎಸ್ ಯಡಿಯೂರಪ್ಪ ಹಣ ಬಿಡುಗಡೆ ಮಾಡಿದ್ದು, ಪೈಪ್‍ಲೈನ್ ಕಾಮಗಾರಿ ಆರಂಭವಾಗಿದೆ. ಮುಂದಿನ ವರ್ಷದ ಇದೇ ವೇಳೆ ಕೆರೆಗಳಲ್ಲಿ ನೀರು ಬರುವುದು ಖಚಿತ ಎಂದರು. 

ಅಪ್ಪರ್‍ಭದ್ರಾ ಯೋಜನೆಯೂ ಕೂಡ ಬಿ.ಎಸ್ ಯಡಿಯೂರಪ್ಪ ಅವರಿಂದ 2.4 ಟಿಎಂಸಿ ನೀರಿಗೆ ಮಂಜೂರಾತಿ ಮಾಡಿಸಿ ನೀರು ಹಂಚಿಕೆ ಮಾಡಿಸಲಾಗಿತ್ತು. ನಂತರ ಬಂದ ಸರ್ಕಾರ ಯಾವ ಕೆಲಸ ಮಾಡಲಿಲ್ಲ, ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಸರ್ವೇ ಕೆಲಸ ಮುಗಿಸಲಾಗಿದ್ದು, ಸುಮಾರು 1200 ಕೋಟಿ  ವೆಚ್ಚದಲ್ಲಿ 40 ಸಾವಿರ ಎಕರೆ ಪ್ರದೇಶವನ್ನು ಹನಿ ನೀರಾವರಿ ಪದ್ದತಿಯನ್ನು ಅಳವಡಿಸಲಾಗುವುದು ಎಂದು ತಿಳಿಸಿದರು. 

ಸಿದ್ದರಾಮಯ್ಯನವರು 2800 ಕೋಟಿಯಲ್ಲಿ ತುಂಗಾಭದ್ರಾ ಹಿನ್ನೀರಿನಿಂದ ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿರುವ ಕ್ಷೇತ್ರಗಳಿಗೆ ನೀರು ಕೊಡುವ ಮಹತ್ವದ ಯೋಜನೆ ಜಾರಿಗೆ ತಂದರು, ಅಂದಿನ ಶಾಸಕರ ನಿರ್ಲಕ್ಷದಿಂದ ಜಗಳೂರು ತಾಲ್ಲೂಕು ಕೈತಪ್ಪುವಂತಾಯಿತು. ನಾನಿದ್ದಿದ್ರೆ ರಕ್ತ ಹರಿಸಿಯಾದರು ನೀರು ತರು ತ್ತಿದ್ದೇ,  ಈಗ ಸಿಎಂ ಬಿಎಸ್‍ವೈ ಮೇಲೆ ಒತ್ತಡ ಹಾಕಿ ಕನಿಷ್ಠ ಐದಾರು ಗ್ರಾಮಗಳಿಗಾದರೂ ನೀರು ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ರಾಮಚಂದ್ರ ಭರವಸೆ ನೀಡಿದರು. 

ಜಿ.ಪಂ ಸದಸ್ಯ ಎಸ್.ಕೆ ಮಂಜುನಾಥ್, ತಾ.ಪಂ ಸದಸ್ಯ ಸಿದ್ದೇಶ್, ಸಂಘದ ಜಿಲ್ಲಾ ಉಪಾಧ್ಯಕ್ಷ ಅಣಬೂರು ಕೊಟ್ರೇಶ್, ಮಾಜಿ ಜಿಲ್ಲಾ ಉಪಾಧ್ಯಕ್ಷ ಬಿ.ಪಿ ಸುಭಾನ್ ಮಾತನಾಡಿದರು. ಸಂಘದ ಅಧ್ಯಕ್ಷ ಜಿ.ಎಸ್ ಚಿದಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು. 

ನೂತನ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ವಿ. ರಾಮಚಂದ್ರ ಹಾಗೂ ಕರೊನಾ ವಾರಿಯರ್ಸ್‍ಗಳಾದ ತಹಸೀಲ್ದಾರ್ ಡಾ. ನಾಗವೇಣಿ, ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ, ಸಿಪಿಐ ದುರುಗಪ್ಪ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. 

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಶಾಂತಕುಮಾರಿ ಶಶೀಧರ್, ಉಮಾವೆಂಟಕೇಶ್, ಸವಿತಾ ಕಲ್ಲೇಶಪ್ಪ, ಶಾಸಕರ ಪುತ್ರ ಅಜೇಂದ್ರ ಸಿಂಹ,ಬಿಜೆಪಿ ತಾಲೂಕಾಧ್ಯಕ್ಷ ಎಚ್.ಸಿ ಮಹೇಶ್, ಮಾಜಿ ಅಧ್ಯಕ್ಷ ಡಿ.ವಿ ನಾಗಪ್ಪ, ಮಾಜಿ ಜಿ,ಪಂ.ಸದಸ್ಯ ಹೆಚ್,ನಾಗರಾಜ್, ತಾ.ಪಂ ಇಒ ಮಲ್ಲನಾಯ್ಕ,ಪ,ಪಂ ಮುಖ್ಯಾದಿಕಾರಿ ರಾಜು ಬಣಕಾರ್ ಮತ್ತಿತರರು ಉಪಸ್ತಿತರಿದ್ದರು.

error: Content is protected !!